ಜುಡೋ: ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಅವತಾರ್, ಯಶ್ ಗೆ ಸೋಲು
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜುಡೋ ಸ್ಪರ್ಧೆಯಲ್ಲಿ ಅವತಾರ್ ಸಿಂಗ್ ಹಾಗೂ ಯಶ್ ಘಂಘಾಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದಾರೆ.
ಪುರುಷರ -100 ಕೆಜಿ ವಿಭಾಗದಲ್ಲಿ ಅವತಾರ್ ಸಿಂಗ್ ಸೈಪ್ರಸ್ನ ಅರಿಸ್ಟೊಸ್ ಮೈಕಲ್ ವಿರುದ್ಧ ಅಂತಿಮ-16ರ ಸುತ್ತಿನಲ್ಲಿ ಕೂದಲೆಳೆ ಅಂತರದಿಂದ ಸೋತಿದ್ದಾರೆ. ಸ್ಪರ್ಧೆಯುದ್ದಕ್ಕೂ ಸಮಬಲದ ಹೋರಾಟ ಕಂಡುಬಂದಿದ್ದು, ಇಬ್ಬರು ಜುಡೊಕಾಸ್ಗಳು ಅವಕಾಶಕ್ಕಾಗಿ ಪರದಾಡಿದರು. ಸ್ಪರ್ಧೆಯು ಗೋಲ್ಡನ್ ಸ್ಕೋರ್ಗೆ ವಿಸ್ತರಿಸಲ್ಪಟ್ಟಿದ್ದು, ಇಪ್ಪೋನ್ ಮೂಲಕ ಮೈಕಲ್ ಜಯಶಾಲಿಯಾದರು. ಭಾರತೀಯನ ಅಭಿಯಾನ ಅಂತ್ಯಗೊಂಡಿತು.
ಅಂತಿಮ-16ರ ಸುತ್ತಿನಲ್ಲಿ ವೇಲ್ಸ್ನ ಜೋಶುವಾ ವೈಟ್ಹೌಸ್ ವಿರುದ್ಧ ಯಶ್ ಘಂಘಾಸ್ ಸೋಲುಣ್ಣುವುದರೊಂದಿಗೆ ಪುರುಷರ +100 ಕೆಜಿ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ನಿಗದಿತ ಸಮಯದಲ್ಲಿ ಮೇಲುಗೈಸಾಧಿಸಿದ ವೈಟ್ಹೌಸ್ ಅವರು ಭಾರತೀಯ ಜುಡೊ ಪಟುವನ್ನು ಸ್ಪರ್ಧೆಯಿಂದ ಹೊರಗಿಟ್ಟರು.
ಇಶ್ರೂಪ್ ನಾರಂಗ್ಗೆ ಕ್ವಾರ್ಟರ್ಫೈನಲ್ನಲ್ಲಿ ಸೋಲು
ಇಶ್ರೂಪ್ ನಾರಂಗ್ ಮಹಿಳೆಯರ 78 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದರು. ಆದರೆ ಇಂಗ್ಲೆಂಡ್ನ ಎಮ್ಮಾ ರೆಡ್ ವಿರುದ್ಧ ಸೋಲುನುಭವಿಸಿದ್ದಾರೆ. ರೆಪೆಚೇಜ್ ಮೂಲಕ ಕಂಚಿನ ಪದಕ ಗೆಲ್ಲುವ ಸ್ಪರ್ಧೆಯಲ್ಲಿ ನಾರಂಗ್ ಉಳಿದುಕೊಂಡಿದ್ದಾರೆ.
ಸ್ಕಾಟ್ಲ್ಯಾಂಡ್ನ ನಿಕೋಲ್ ವುಡ್ರನ್ನು ಮಣಿಸುವ ಮೂಲಕ ನಾರಂಗ್ ಕ್ವಾರ್ಟರ್ ಫೈನಲ್ಗೆ ತಲುಪಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯ ಫಲಿತಾಂಶವನ್ನು ಗೋಲ್ಡನ್ ಸ್ಕೋರ್ನಲ್ಲಿ ನಿರ್ಧರಿಸಲಾಯಿತು.






