Commonwealth Games 2026 | ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದ ಭಾರತ

Photo Credit: X/@India_AllSports
ಹೊಸದಿಲ್ಲಿ: ಒಟ್ಟು 39 ಪದಕಗಳೊಂದಿಗೆ (13 ಚಿನ್ನ, 17 ಬೆಳ್ಳಿ, 9 ಕಂಚು)ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿರುವ ಭಾರತ ತಂಡವು ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್ನಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಅಂತ್ಯಗೊಳಿಸಿದೆ.
ಆಸ್ಟ್ರೇಲಿಯ ತಂಡವು 62 ಚಿನ್ನದ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರೆ, ಇಂಗ್ಲೆಂಡ್(26 ಚಿನ್ನ)ಹಾಗೂ ಕೆನಡಾ(18 ಚಿನ್ನ) ಆ ನಂತರದ ಸ್ಥಾನ ಪಡೆದಿವೆ.
ಬಾಕ್ಸಿಂಗ್ನಲ್ಲಿ ಭಾರತವು ಭಾರೀ ಯಶಸ್ಸು ಸಾಧಿಸಿದೆ. ಭಾರತೀಯ ಬಾಕ್ಸರ್ಗಳು ಏಳು ಚಿನ್ನ ಹಾಗೂ ಮೂರು ಬೆಳ್ಳಿ ಸಹಿತ ಒಟ್ಟು 10 ಪದಕಗಳನ್ನು ಜಯಿಸಿದ್ದಾರೆ.
ಭಾರತದ ಮಹಿಳಾ ಬಾಕ್ಸರ್ಗಳು ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ ಜೈಸ್ಮಿನ್ ಲ್ಯಾಂಬೋರಿಯಾ(57ಕೆಜಿ), ಸಾಕ್ಷಿ ಚೌಧರಿ(51ಕೆಜಿ), ಏಶ್ಯನ್ ಗೇಮ್ಸ್ ಮೆಡಲಿಸ್ಟ್ ಪ್ರೀತಿ ಪವಾರ್(54ಕೆಜಿ), ಏಶ್ಯನ್ ಚಾಂಪಿಯನ್ ಪ್ರಿಯಾ ಘಂಘಾಸ್(60ಕೆಜಿ) ಹಾಗೂ ಅರುಂಧತಿ ಚೌಧರಿ(70 ಕೆಜಿ) ಮೊದಲ ಸ್ಥಾನ ಪಡೆದರು.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲೀನಾ ಬೋರ್ಗೊಹೈನ್ ಮಹಿಳೆಯರ 75 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರು.
ಪುರುಷರ ಸ್ಪರ್ಧಾವಳಿಯಲ್ಲಿ ಸಚಿನ್ ಸಿವಾಚ್(60ಕೆಜಿ)ಹಾಗೂ ಅಂಕುಶ್ ಪಾಂಘಾಲ್(70ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ. ಜಾದುಮಣಿ ಸಿಂಗ್(55 ಕೆಜಿ)ಹಾಗೂ ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ವಿಜೇತ ನರೇಂದರ್ ಬೆರ್ವಾಲ್(+90ಕೆಜಿ)ಬೆಳ್ಳಿಗೆ ತೃಪ್ತಿಪಟ್ಟಿದ್ದರು.
ಭಾರತವು 2018ರ ಗೋಲ್ಡ್ಕೋಸ್ಟ್ ಗೇಮ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿತ್ತು. ಆಗ ಮೂರು ಚಿನ್ನ ಸಹಿತ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿತ್ತು.
ಜುಡೋದಲ್ಲಿ ಐತಿಹಾಸಿಕ ಅಭಿಯಾನ:
ಭಾರತವು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜುಡೋದಲ್ಲಿ ಇದೇ ಮೊದಲ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದೆ.
ಅಸ್ಮಿತಾ ಡೇ(ಮಹಿಳೆಯರ -48ಕೆಜಿ)ಹಾಗೂ ಹರ್ಷ ಸಿಂಗ್(ಪುರುಷರ -60ಕೆಜಿ) ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜುಡೋದಲ್ಲಿ ಇದೇ ಮೊದಲ ಬಾರಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದರು. ಯಾಮಿನಿ ಮೌರ್ಯ(ಮಹಿಳೆಯರ-57ಕೆಜಿ) ಬೆಳ್ಳಿ ಹಾಗೂ ಉನ್ನತಿ ಶರ್ಮಾ(ಮಹಿಳೆಯರ -63ಕೆಜಿ)ಕಂಚಿನ ಪದಕ ಜಯಿಸಿದ್ದಾರೆ.
ಅತ್ಲೆಟಿಕ್ಸ್ ಹಾಗೂ ಪ್ಯಾರಾ ಅತ್ಲೆಟಿಕ್ಸ್ನಲ್ಲಿ ಸ್ಮರಣೀಯ ಪ್ರದರ್ಶನ
ಭಾರತವು ಅತ್ಲೆಟಿಕ್ಸ್ನಲ್ಲಿ ಹಲವು ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದಿದೆ. ಸೋಮನ್ ರಾಣಾ ಪುರುಷರ ಎಫ್57 ಶಾಟ್ಪುಟ್ನಲ್ಲಿ ಚಿನ್ನದ ಪದಕ ಜಯಿಸಿದರು. ಶುಭಮ್ ಜುಯಲ್ ಬೆಳ್ಳಿ ಪದಕ ಜಯಿಸಿದರು.
ಪುರುಷರ 5,000 ಮೀ. ಓಟದಲ್ಲಿ ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದಿರುವ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿರುವ ಗುಲ್ವೀರ್ ಸಿಂಗ್ ಐತಿಹಾಸಿಕ ಸಾಧನೆ ಮಾಡಿದರು. ಗುಲ್ವೀರ್ ಅವರು ಪುರುಷರ 10,000 ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ಒಂದೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎರಡು ವೈಯಕ್ತಿಕ ಪದಕಗಳನ್ನು ಗೆದ್ದಿರುವ ಮೊದಲ ಭಾರತೀಯ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್ ಎನಿಸಿಕೊಂಡಿದ್ದಾರೆ.
ಪುರುಷರ ಟ್ರಿಪಲ್ ಜಂಪ್ನಲ್ಲಿ ಭಾರತವು ಎರಡು ಪದಕ ಗಳಿಸಿದೆ. ಪ್ರವೀಣ್ ಚಿತ್ರವೇಲ್ ಬೆಳ್ಳಿ ಪದಕ ಜಯಿಸಿದರೆ , ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಿಂಚಿದ ಪ್ಯಾರಾ ಅತ್ಲೀಟ್ಗಳು:
ಭಾರತದ ಪ್ಯಾರಾ ಅತ್ಲೀಟ್ಗಳು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.
28 ಸದಸ್ಯರನ್ನು ಒಳಗೊಂಡ ಪ್ಯಾರಾ ಅತ್ಲೀಟ್ಗಳ ತಂಡವು ಮೂರು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚು ಸಹಿತ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡು ಮಿಂಚಿದೆ. ಈ ಹಿಂದಿನ ಎಲ್ಲ ಕಾಮನ್ವೆಲ್ತ್ ಗೇಮ್ಸ್ನಲ್ಲಿನ ಪದಕದ ಸಂಖ್ಯೆಯನ್ನು ಸರಿಗಟ್ಟಿದೆ.
ಪ್ಯಾರಾ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್ಗಳು ಮೂರು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಆರು ಪದಕಗಳನ್ನು ಜಯಿಸಿದ್ದಾರೆ. ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಜಂಡು ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ.






