ಕಾಮನ್ವೆಲ್ತ್ ಗೇಮ್ಸ್ 2026 | ಭಾರತಕ್ಕೆ 6 ಪದಕಗಳ ಯಶಸ್ಸಿನ ದಿನ; ಒಟ್ಟು 10 ಪದಕಗಳೊಂದಿಗೆ 8ನೇ ಸ್ಥಾನ

ವಲ್ಲೂರಿ ಅಜಯ್ ಬಾಬು| ಬಿಂದ್ಯಾರಾಣಿ ದೇವಿ Photo: x.com/WeAreTeamIndia
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ 2026 ರಲ್ಲಿ ಸೋಮವಾರ ಭಾರತವು ಒಟ್ಟು ಆರು ಪದಕಗಳನ್ನು ಗೆಲ್ಲುವ ಮೂಲಕ ತನ್ನ ಅತ್ಯುತ್ತಮ ದಿನವನ್ನಾಗಿ ಮಾಡಿತು.
ಮಹಿಳೆಯರ F57 ಶಾಟ್ಪುಟ್ ಸ್ಪರ್ಧೆಯಲ್ಲಿ ಶರ್ಮಿಳಾ ಧನ್ಕರ್ ಅವರು 9.81 ಮೀಟರ್ ಎಸೆತದೊಂದಿಗೆ ಪ್ರಶಸ್ತಿ ಗೆದ್ದು, ಕಾಮನ್ವೆಲ್ತ್ ಗೇಮ್ಸ್ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾರತ ಅನುಭವಿಸುತ್ತಿದ್ದ 20 ವರ್ಷಗಳ ಪದಕದ ಕಾಯುವಿಕೆಗೆ ಅಂತ್ಯ ಹಾಡಿದರು. ಇದೇ ವಿಭಾಗದಲ್ಲಿ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಪುರುಷರ ಹೈಜಂಪ್ನಲ್ಲಿ ಸರ್ವೇಶ್ ಕುಶಾರೆ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ರಾಷ್ಟ್ರೀಯ ದಾಖಲೆ ಹೊಂದಿರುವ ಅವರು 2.25 ಮೀಟರ್ ಎತ್ತರ ಜಿಗಿದರು. ಜಮೈಕಾದ ರೊಮೈನ್ ಬೆಕ್ಫೋರ್ಡ್ ಅವರೊಂದಿಗೆ ಸಮಬಲ ಸಾಧಿಸಿದರೂ, ಕೌಂಟ್ಬ್ಯಾಕ್ ನಿಯಮದ ಆಧಾರದಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡರು.
ಪದಕಗಳ ಬೇಟೆ ಮುಂದುವರಿಸಿದ ವೇಟ್ಲಿಫ್ಟರ್ಗಳು
ವೇಟ್ಲಿಫ್ಟಿಂಗ್ ವಿಭಾಗವು ಮತ್ತೊಮ್ಮೆ ಭಾರತಕ್ಕೆ ಯಶಸ್ಸು ತಂದುಕೊಟ್ಟಿತು. ರೋಚಕ ಸ್ಪರ್ಧೆಯಲ್ಲಿ ಮಲೇಷ್ಯಾದ ಎರಿ ಹಿದಾಯತ್ ಮುಹಮ್ಮದ್ ಅವರಿಗಿಂತ ಕೇವಲ ಒಂದು ಕಿಲೋಗ್ರಾಂ ಹಿನ್ನಡೆ ಅನುಭವಿಸಿದ ವಲ್ಲೂರಿ ಅಜಯ್ ಬಾಬು, ಪುರುಷರ 79 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.
ಜ್ಞಾನೇಶ್ವರಿ ಯಾದವ್ ಅವರು ಮಹಿಳೆಯರ 53 ಕೆಜಿ ವಿಭಾಗದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನದೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು. ಜೊತೆಗೆ, ಬಿಂದ್ಯಾರಾಣಿ ದೇವಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಸೇರಿಸುವ ಮೂಲಕ ಭಾರತದ ವೇಟ್ಲಿಫ್ಟಿಂಗ್ ಪದಕಗಳ ಸಂಖ್ಯೆಯನ್ನು ಆರಕ್ಕೆ ಏರಿಸಿದರು.
ಈ ಮೂಲಕ ಒಟ್ಟು ಆರು ಪದಕಗಳೊಂದಿಗೆ ಕೂಟದ 5ನೇ ದಿನವನ್ನು ಸ್ಮರಣೀಯವಾಗಿಸಿತು.
ಭಾರತ ಈವರೆಗೆ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ಗೆದ್ದು 8ನೇ ಸ್ಥಾನದಲ್ಲಿದೆ.
ಕೂಟದಲ್ಲಿ ಆಸ್ಟ್ರೇಲಿಯಾ 26 ಚಿನ್ನ, 13 ಬೆಳ್ಳಿ ಮತ್ತು 20 ಕಂಚಿನ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 8 ಚಿನ್ನ, 13 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 7 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಕೆನಡಾ ಮೂರನೇ ಸ್ಥಾನದಲ್ಲಿದೆ.






