Commonwealth Games 2026 | ಕಾಶ್ಮೀರದಲ್ಲಿ ನೆಲ ಬಾಂಬು ಸ್ಫೋಟದಲ್ಲಿ ಕಾಲು ಕಳೆದುಕೊಂಡಿದ್ದ ಸೋಮನ್ ರಾಣಾಗೆ ಒಲಿದ ಚಿನ್ನ

Screengrab : X
ಗ್ಲ್ಯಾಸ್ಗೋ : ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶನಿವಾರ ಭಾರತದ ಪಾಲಿಗೆ ಮತ್ತೊಂದು ಸ್ಮರಣೀಯ ದಿನವಾಗಿ ಪರಿಣಮಿಸಿದ್ದು, ಪ್ಯಾರಾ ಶಾಟ್ಪುಟ್ ಸ್ಪರ್ಧೆಯ ಪುರುಷರ ಎಫ್ 57 ವಿಭಾಗದಲ್ಲಿ ಸೋಮನ್ ರಾಣಾ ಚಿನ್ನದ ಪದಕ ಜಯಿಸಿದರೆ, ಶುಭಮ್ ಜುಯಲ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ಪುರುಷರ ಎಫ್ 57 ಶಾಟ್ಪುಟ್ನಲ್ಲಿ ಸ್ಪರ್ಧಿಸಿದ ಸೋಮನ್ ರಾಣಾ 13.40 ಮೀ.ದೂರಕ್ಕೆ ಶಾಟ್ಪುಟ್ ಎಸೆದು ಈ ವರ್ಷದ ಶ್ರೇಷ್ಠ ಪ್ರದರ್ಶನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಭಾರತದ ಇನ್ನೋರ್ವ ಸ್ಪರ್ಧಿ ಶುಭಮ್ ಜುಯಲ್ ಕೂಡ 13.28 ಮೀ.ದೂರಕ್ಕೆ ಶಾಟ್ಪುಟ್ ಎಸೆದು ಈ ವರ್ಷದ ಶ್ರೇಷ್ಠ ಪ್ರದರ್ಶನದೊಂದಿಗೆ ಬೆಳ್ಳಿ ಪದಕ ಜಯಿಸಿದರು. ಕ್ಯಾಮರೂನ್ನ ಸೆಡ್ರಿಕ್ ಇದ್ರಿಸ್ ಅವರು (12.57 ಮೀ.)ಮೂರನೇ ಸ್ಥಾನ ಪಡೆದರು.
ತನ್ನ ಎರಡನೇ ಪ್ರಯತ್ನದಲ್ಲಿ 13.08 ಮೀ.ದೂರಕ್ಕೆ ಶಾಟ್ಪುಟ್ ಎಸೆದ ಶುಭಮನ್ ಸ್ವಲ್ಪ ಹೊತ್ತು ಮುನ್ನಡೆ ಪಡೆದು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದರು.
ಕಾಶ್ಮೀರದಲ್ಲಿ ನೆಲ ಬಾಂಬು ಸ್ಫೋಟದಲ್ಲಿ ಕಾಲು ಕಳೆದುಕೊಂಡಿದ್ದ ರಾಣಾ:
ಚಿನ್ನದ ಪದಕಕ್ಕೆ ಮುತ್ತಿಟ್ಟಿರುವ ಬಿಹಾರದ ಪ್ಯಾರಾ ಅತ್ಲೀಟ್ ಸೋಮನ್ ರಾಣಾ ತನ್ನ ಸ್ಫೂರ್ತಿಯುತ ಕ್ರೀಡಾ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. ಭಾರತೀಯ ಸೇನಾ ಸಿಬ್ಬಂದಿಯಾಗಿರುವ ರಾಣಾ ಅವರು ಬಡ ಕುಟುಂಬದಿಂದ ಬಂದಿದ್ದಾರೆ. ರಾಣಾ ಅವರ ತಂದೆ ರೈತರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
2001ರಲ್ಲಿ ಗೋರಖ್ ರೈಫಲ್ಸ್ನ ಸಿಪಾಯಿಯಾಗಿ ಸೇನೆಗೆ ಸೇರಿದರು. ಒಂದೊಮ್ಮೆ ಭರವಸೆಯ ಬಾಕ್ಸರ್ ಆಗಿದ್ದ ರಾಣಾ 2005ರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಐದನೇ ಸ್ಥಾನ ಪಡೆದಿದ್ದರು. ಆದರೆ 2006ರಲ್ಲಿ ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಕರ್ತವ್ಯದಲ್ಲಿದ್ದಾಗ ನಡೆದ ನೆಲಬಾಂಬ್ ಸ್ಫೋಟವು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಆ ಸ್ಫೋಟದಲ್ಲಿ ರಾಣಾ ಕಾಲು ಕಳೆದುಕೊಂಡ ನಂತರ ಅವರು ಪ್ಯಾರಾ ಅತ್ಲೀಟ್ ಆಗಿ ಬದಲಾದರು. ಭಾರತದ ಅತ್ಯುತ್ತಮ ಗುಂಡು ಎಸೆತಗಾರರ ಪೈಕಿ ಒಬ್ಬರಾಗಿ ಗುರುತಿಸಿಕೊಂಡರು.
ಪುಣೆಯ ಕೃತಕ ಅಂಗ ಕೇಂದ್ರಕ್ಕೆ ವರ್ಗಾವಣೆಯಾದ ರಾಣಾ ಪ್ಯಾರಾ ಅತ್ಲೀಟ್ ಆಗಿ ಕ್ರೀಡೆಯಲ್ಲಿ ತನ್ನ ಬದುಕು ಕಟ್ಟಿಕೊಂಡರು. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಹಾಗೂ 2024ರ ಪ್ಯಾರಾಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದರು.
ಎರಡು ಬಾರಿಯ ಪ್ಯಾರಾ ಒಲಿಂಪಿಯನ್ ಆಗಿರುವ ರಾಣಾ 2025ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅತ್ಲೆಟಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಗ್ಲಾಸ್ಗೊ ಗೇಮ್ಸ್ಗಿಂತ ಮೊದಲು ಸೋಮನ್ ರಾಣಾ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ 2022ರ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದೀಗ ತನ್ನ ಸಾಧನೆಯ ಪಟ್ಟಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ಸೇರಿಸಿಕೊಂಡರು.






