Commonwealth Games 2026 | 5,000 ಮೀ. ಓಟದ ಫೈನಲ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಅತ್ಲೀಟ್ ಗುಲ್ವೀರ್ ಸಿಂಗ್

ಗುಲ್ವೀರ್ ಸಿಂಗ್ - Photo Credit: X/@rajnathsingh
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪುರುಷರ 5,000 ಮೀ. ಓಟದ ಫೈನಲ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅತ್ಲೀಟ್ ಆಗಿರುವ ಗುಲ್ವೀರ್ ಸಿಂಗ್ ಇತಿಹಾಸ ನಿರ್ಮಿಸಿದರು.
ಗುಲ್ವೀರ್ ಅವರು ಒಂದೇ ಆವೃತ್ತಿಯ ಗೇಮ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಮೊದಲ ಭಾರತೀಯ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಜುಲೈ 28ರಂದು 10,000 ಮೀ.ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಹಾಲಿ ಏಶ್ಯನ್ ಚಾಂಪಿಯನ್ ಗುಲ್ವೀರ್ ಸಿಂಗ್ 5,000 ಮೀ. ಓಟದ ಫೈನಲ್ನಲ್ಲಿ 13:24.95 ಅವಧಿಯಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡರು.
ಅತ್ಲೆಟಿಕ್ಸ್ ಸ್ಪರ್ಧಾವಳಿಯ ಕೊನೆಯ ದಿನವಾದ ಶನಿವಾರ ಕೀನ್ಯದ ಮ್ಯಾಥ್ಯೂ ಕಿಪ್ಚುಂಬಾ ಕಿಪ್ಸಾಂಗ್ 13:23.61 ಅವಧಿಯಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರೆ, ಈ ಮೊದಲು 10,000 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿದ್ದ ಆಸ್ಟ್ರೇಲಿಯದ ಕೀ ರಾಬಿನ್ಸನ್(13:24.70)ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
5,000 ಮೀ. ಹಾಗೂ 10,000 ಮೀ. ಎರಡರಲ್ಲೂ ರಾಷ್ಟ್ರೀಯ ದಾಖಲೆ ಹೊಂದಿರುವ 28ರ ವಯಸ್ಸಿನ ಗುಲ್ವೀರ್ ತನ್ನ ಈ ಋತುವಿನ ಶ್ರೇಷ್ಠ ಸಮಯ(13:03.93)ದಲ್ಲಿ ಗುರಿ ತಲುಪಲು ವಿಫಲರಾದರು. ಶನಿವಾರದ ಸ್ಪರ್ಧೆಯಲ್ಲಿ ಗುಲ್ವೀರ್ ಅವರು ತನ್ನ ರಾಷ್ಟ್ರೀಯ ದಾಖಲೆ(12:59.77)ಗಿಂತಲೂ ನಿಧಾನವಾಗಿ ಗುರಿ ತಲುಪಿದ್ದಾರೆ.
ಕೀನ್ಯದ ಕಾರ್ನಿಲಿಯಸ್ ಕೆಂಬೊಯ್ ಅವರನ್ನು ಕೇವಲ 0.04 ಸೆಕೆಂಡ್ನಲ್ಲಿ ಹಿಂದಿಕ್ಕಿದ ಗುಲ್ವೀರ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಗುಲ್ವೀರ್ 2023ರಲ್ಲಿ ಹಾಂಗ್ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ನಲ್ಲೂ 10,000 ಮೀ.ಓಟದಲ್ಲಿ ಕಂಚಿನ ಪದಕ ಜಯಿಸಿದ್ದರು.






