Commonwealth Games 2026 | ಬಾಕ್ಸಿಂಗ್ನಲ್ಲಿ ನರೇಂದರ್ ಬೆರ್ವಾಲ್ಗೆ ಬೆಳ್ಳಿ ಪದಕ

Photo:screengrab/x.com/ANI
ಹೊಸದಿಲ್ಲಿ: ಕಾಮನ್ವೆಲ್ತ್ ಕ್ರೀಡಾಕೂಟ (CWG)–2026ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಒಟ್ಟು ಏಳು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ಇದು ಭಾರತದ ಅತ್ಯುತ್ತಮ ಸಾಧನೆಯಾಗಿದೆ.
ಶನಿವಾರ ನಡೆದ ಪುರುಷರ 90+ ಕೆಜಿ ವಿಭಾಗದ ಫೈನಲ್ನಲ್ಲಿ ಹಾಂಗ್ಝೌ ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ನರೇಂದರ್ ಬೆರ್ವಾಲ್, ಇಂಗ್ಲೆಂಡ್ನ ಡಮರ್ ಥಾಮಸ್ ವಿರುದ್ಧ 0–5 ಅಂತರದ ಸರ್ವಾನುಮತದ ತೀರ್ಪಿನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದಕ್ಕೂ ಮುನ್ನ ಪುರುಷರ 80 ಕೆಜಿ ವಿಭಾಗದ ಫೈನಲ್ನಲ್ಲಿ ಅಂಕುಶ್ ಪಂಗಲ್, ಇಂಗ್ಲೆಂಡ್ನ ಡಿಮೆಜಿ ಶಿಟ್ಟು ಅವರನ್ನು 4–1 ಅಂತರದಿಂದ ಮಣಿಸಿ ಭಾರತಕ್ಕೆ ಏಳನೇ ಚಿನ್ನದ ಪದಕ ತಂದುಕೊಟ್ಟರು.
ಪುರುಷರ 60 ಕೆಜಿ ವಿಭಾಗದ ಫೈನಲ್ನಲ್ಲಿ ಸಚಿನ್ ಸಿವಾಚ್ ರೋಚಕ ಪುನರಾಗಮನದ ಮೂಲಕ ಚಿನ್ನ ಗೆದ್ದರು. ಮೊದಲ ಎರಡು ಸುತ್ತುಗಳಲ್ಲಿ ಹಿನ್ನಡೆಯಲ್ಲಿದ್ದ ಸಚಿನ್, ಮೂರನೇ ಹಾಗೂ ಅಂತಿಮ ಸುತ್ತಿನಲ್ಲಿ ನಮೀಬಿಯಾದ ಟ್ರಯಗೈನ್ ಮಾರ್ನಿಂಗ್ ಎನ್ಡೆವೆಲೊ ಅವರನ್ನು ಸ್ಟ್ಯಾಂಡಿಂಗ್ ಕೌಂಟ್ಗೆ ಒಳಪಡಿಸಿದರು. ಇದರೊಂದಿಗೆ 3–2 ಅಂತರದ ಸ್ಪ್ಲಿಟ್ ತೀರ್ಪಿನ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಮಹಿಳೆಯರ 54 ಕೆಜಿ ವಿಭಾಗದ ಫೈನಲ್ನಲ್ಲಿ ಪ್ರೀತಿ ಪವಾರ್, ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ವಿರುದ್ಧ 5–0 ಅಂತರದ ಸರ್ವಾನುಮತದ ಗೆಲುವು ಸಾಧಿಸಿ ಭಾರತದ ಚಿನ್ನದ ಬೇಟೆಗೆ ಚಾಲನೆ ನೀಡಿದರು.
ಮಹಿಳೆಯರ 57 ಕೆಜಿ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ, ಉತ್ತರ ಐರ್ಲೆಂಡ್ನ ಮೈಕೆಲಾ ವಾಲ್ಷ್ ಅವರನ್ನು 5–0 ಅಂತರದಿಂದ ಮಣಿಸಿ ಚಿನ್ನದ ಪದಕ ಗೆದ್ದರು.
ಮಹಿಳೆಯರ 51 ಕೆಜಿ ವಿಭಾಗದ ಫೈನಲ್ನಲ್ಲಿ ಸಾಕ್ಷಿ ಚೌಧರಿ, ಇಂಗ್ಲೆಂಡ್ನ ರೂಬಿ ವೈಟ್ ವಿರುದ್ಧ 5–0 ಅಂತರದಿಂದ ಗೆದ್ದು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟರು.
ಮಹಿಳೆಯರ 70 ಕೆಜಿ ವಿಭಾಗದ ಫೈನಲ್ನಲ್ಲಿ ಅರುಂಧತಿ ಚೌಧರಿ, ಇಂಗ್ಲೆಂಡ್ನ ಚಾಂಟೆಲ್ಲೆ ರೀಡ್ ಅವರನ್ನು 5–0 ಅಂತರದಿಂದ ಮಣಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪ್ರಿಯಾ ಘಂಘಾಸ್ ಕೂಡ ತಮ್ಮ ವಿಭಾಗದಲ್ಲಿ ಚಿನ್ನ ಗೆದ್ದು ಭಾರತದ ಪದಕ ಬೇಟೆಗೆ ಮತ್ತಷ್ಟು ಮೆರುಗು ತಂದರು.
ಇನ್ನೊಂದೆಡೆ, ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ 70 ಕೆಜಿ ವಿಭಾಗದ ಫೈನಲ್ನಲ್ಲಿ ಆಸ್ಟ್ರೇಲಿಯಾದ ಎಮ್ಮಾ-ಸ್ಯೂ ಗ್ರೀನ್ಟ್ರೀ ವಿರುದ್ಧ 1–4 ಅಂತರದಿಂದ ಸೋತು ಬೆಳ್ಳಿ ಪದಕ ಪಡೆದರು. ಜಾದುಮಣಿ ಸಿಂಗ್ ಕೂಡ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು.
ಈ ಮೂಲಕ ಅಂಕುಶ್ ಪಂಗಲ್, ಸಚಿನ್ ಸಿವಾಚ್, ಪ್ರೀತಿ ಪವಾರ್, ಜೈಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಅರುಂಧತಿ ಚೌಧರಿ ಮತ್ತು ಪ್ರಿಯಾ ಘಂಘಾಸ್ ಅವರ ಏಳು ಚಿನ್ನದ ಪದಕಗಳು ಹಾಗೂ ನರೇಂದರ್ ಬೆರ್ವಾಲ್, ಲೊವ್ಲಿನಾ ಬೊರ್ಗೊಹೈನ್ ಮತ್ತು ಜಾದುಮಣಿ ಸಿಂಗ್ ಅವರ ಮೂರು ಬೆಳ್ಳಿ ಪದಕಗಳೊಂದಿಗೆ ಭಾರತ ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿತು.






