Glasgow 2026 Commonwealth Games | ಕೂಟ ದಾಖಲೆಯೊಂದಿಗೆ ಮೀರಾಬಾಯಿಗೆ ವೇಟ್ ಲಿಫ್ಟಿಂಗ್ ಚಿನ್ನ

Photo : x@mirabai_chanu
ಗ್ಲಾಸ್ಗೊ, ಜು.26: ಸ್ಕಾಟ್ಲೆಂಡ್ ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಮಹಿಳೆಯರ ವೇಟ್ ಲಿಫ್ಟಿಂಗ್ನ 49 ಕೆಜಿ ವಿಭಾಗದಲ್ಲಿ ರವಿವಾರ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಜೊತೆಗೆ, ಸ್ನ್ಯಾಚ್ ವಿಭಾಗದಲ್ಲಿ 85 ಕೆಜಿ ಎತ್ತುವ ಮೂಲಕ ನೂತನ ಕೂಟ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಇದು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಅವರ ಸತತ ಮೂರನೇ ಚಿನ್ನದ ಪದಕವಾಗಿದೆ. ಅವರು 2018 ಮತ್ತು 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದರು. ಗ್ಲಾಸ್ಗೊದಲ್ಲಿ 31 ವರ್ಷದ ಚಾನು ಅವರ ಸ್ಪರ್ಧೆ ಅಡೆತಡೆಗಳಿಂದ ಮುಕ್ತವಾಗಿರಲಿಲ್ಲ. ಸ್ನ್ಯಾಚ್ ನಲ್ಲಿ ಮೊದಲ ಪ್ರಯತ್ನದಲ್ಲಿ 82 ಕೆಜಿ ಎತ್ತಲು ಅವರು ವಿಫಲರಾದರು.
ಆದರೆ, ಎರಡನೇ ಪ್ರಯತ್ನದಲ್ಲಿ ಅವರು 82 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 85 ಕೆಜಿ ಎತ್ತಿದರು. ಬಳಿಕ, ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 105 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಆ ಮೂಲಕ ಅವರು ಚಿನ್ನದ ಪದಕವನ್ನು ಖಾತರಿಪಡಿಸಿದರು.
ನೈಜೀರಿಯಾದ ರುತ್ ಅಸುಕೊ ನಯೋಂಗ್ ಬೆಳ್ಳಿ ಗೆದ್ದರೆ, ಮಲೇಶ್ಯಾದ ಐರೀನ್ ಜೇನ್ ಹೆನ್ರಿ ಕಂಚಿನ ಪದಕ ಪಡೆದರು.




