ಕಾಮನ್ವೆಲ್ತ್ ಗೇಮ್ಸ್ | ಭಾರತದ ಒಟ್ಟು ಪದಕಗಳ ಸಂಖ್ಯೆ 17ಕ್ಕೆ ಏರಿಕೆ

ಲವ್ಪ್ರೀತ್ ಸಿಂಗ್ | Photo Credit : PTI
ಕಾಮನ್ವೆಲ್ತ್ ಗೇಮ್ಸ್ , ಹೊಸದಿಲ್ಲಿ, ಜು.31: ಗ್ಲಾಸ್ಗೊದಲ್ಲಿ ನಡೆಯುತ್ತಿರುವ 2026ರ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ನ ಎಂಟನೇ ದಿನವಾದ ಗುರುವಾರ ಭಾರತ ಇನ್ನೂ ಎರಡು ಪದಕಗಳನ್ನು ಗೆದ್ದುಕೊಂಡಿದೆ. ವೇಟ್ಲಿಫ್ಟರ್ ಲವ್ಪ್ರೀತ್ ಸಿಂಗ್ ಬೆಳ್ಳಿ ಪದಕ ಗೆದ್ದರೆ, ಡಿಸ್ಕಸ್ ಎಸೆತಗಾರ್ತಿ ಸೀಮಾ ಕಾಲಿರಾಮ್ನಾ ಕಂಚಿನ ಪದಕ ಗೆದ್ದುಕೊಂಡರು. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 17ಕ್ಕೇರಿದೆ.
ಗುರುವಾರದ ಸ್ಪರ್ಧಾವಳಿಯ ಅಂತ್ಯಕ್ಕೆ ಭಾರತವು ಒಟ್ಟು ಮೂರು ಚಿನ್ನ, 10 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದುಕೊಂಡಿದೆ. ಪದಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.
ಎಂಟನೇ ದಿನದಂದು ಭಾರತವು ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಕ್ರೀಡಾಕೂಟದ ಅಂತಿಮ ಹಂತದಲ್ಲಿ ವೇಟ್ಲಿಫ್ಟಿಂಗ್, ಬಾಕ್ಸಿಂಗ್ ಹಾಗೂ ಅತ್ಲೆಟಿಕ್ಸ್ ವಿಭಾಗಗಳಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡುತ್ತಿದೆ. ಇನ್ನಷ್ಟು ಪದಕಗಳನ್ನು ಗೆಲ್ಲುವ ಅವಕಾಶವಿದೆ.
ದಾಖಲೆಯ ಪ್ರದರ್ಶನದೊಂದಿಗೆ ಬೆಳ್ಳಿಗೆ ಮುತ್ತಿಟ್ಟ ಲವ್ಪ್ರೀತ್
ಭಾರತವು ಗುರುವಾರ ತನ್ನ ಮೊದಲ ಪದಕವನ್ನು ಪುರುಷರ +110 ಕೆಜಿ ವೇಟ್ಲಿಫ್ಟಿಂಗ್ ಸ್ಪರ್ಧಾವಳಿಯಲ್ಲಿ ಗೆದ್ದುಕೊಂಡಿತು. ಲವ್ಪ್ರೀತ್ ಸಿಂಗ್ ತನ್ನ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡರು.
ಲವ್ಪ್ರೀತ್ ಅವರು ಸ್ನ್ಯಾಚ್ನಲ್ಲಿ 176 ಕೆಜಿ ಎತ್ತಿ ಹಿಡಿದು ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 212 ಕೆಜಿ ಭಾರ ಎತ್ತುವುದರೊಂದಿಗೆ ಮತ್ತೊಂದು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಒಟ್ಟು 338 ಕೆಜಿ ಎತ್ತಿಹಿಡಿದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
ಭಾರತೀಯ ವೇಟ್ಲಿಫ್ಟರ್ ಕೂದಲೆಳೆ ಅಂತರದಿಂದ ಚಿನ್ನದ ಪದಕದಿಂದ ವಂಚಿತರಾದರು. ಮೊದಲ ಸ್ಥಾನದೊಂದಿಗೆ ಚಿನ್ನ ಗೆದ್ದಿರುವ ನ್ಯೂಝಿಲ್ಯಾಂಡ್ ಸ್ಪರ್ಧಿ ಡೇವಿಡ್ ಲಿಟಿಗಿಂತ ಕೇವಲ ಒಂದು ಕೆಜಿಯಿಂದ ಹಿಂದುಳಿದರು.
ಗ್ಲಾಸ್ಗೋ ಗೇಮ್ಸ್ನಲ್ಲಿ ಭಾರತವು ವೇಟ್ಲಿಫ್ಟಿಂಗ್ವೊಂದರಲ್ಲೇ ಎಂಟನೇ ಪದಕ ಗೆದ್ದುಕೊಂಡಿದೆ. ದೇಶದ ಬಲಿಷ್ಠ ಸ್ಪರ್ಧೆಗಳ ಪೈಕಿ ಒಂದಾಗಿರುವ ವೇಟ್ಲಿಫ್ಟಿಂಗ್ನಲ್ಲಿ ಭಾರತವು ಮತೊಮ್ಮೆ ಯಶಸ್ವಿ ಅಭಿಯಾನ ನಡೆಸಿತು.
*ಸೀಮಾಗೆ ಒಲಿದ ಕಂಚು: ಗುರುವಾರದಂದು ಸೀಮಾ ಕಾಲಿರಾಮ್ನಾ ಭಾರತದ ಖಾತೆಗೆ ಎರಡನೇ ಪದಕವನ್ನು ಸೇರ್ಪಡೆಗೊಳಿಸಿದರು.
ಸ್ಕಾಟ್ಸ್ಟೌನ್ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್ನಲ್ಲಿ ಸೀಮಾ ಅವರು ಕಂಚಿನ ಪದಕ ಗೆದ್ದುಕೊಂಡರು. ಭಾರತೀಯ ಥ್ರೋವರ್ ಸೀಮಾ ಕಂಚಿನ ಪದಕ ಗೆಲ್ಲಲು ಬೆವರಿಳಿಸಬೇಕಾಯಿತು.
ಫೈನಲ್ನ ಮೊದಲ ಸುತ್ತಿನಲ್ಲಿ ಫೌಲ್ ಮಾಡಿದ ಸೀಮಾ ಎರಡನೇ ಸುತ್ತಿನಲ್ಲಿ ಡಿಸ್ಕಸ್ ಅನ್ನು 57.32 ಮೀಟರ್ ದೂರಕ್ಕೆ ಎಸೆದರು. ತನ್ನ ಮೂರನೇ ಪ್ರಯತ್ನದಲ್ಲಿ 58.65 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದಿರುವ ಸೀಮಾ ಕಂಚಿನ ಪದಕ ಗೆಲ್ಲುವ ಸನಿಹ ತಲುಪಿದರು.
ತನ್ನ ಸ್ಪರ್ಧೆಯ ಉಳಿದ ಅವಧಿಯಲ್ಲಿ ಸೀಮಾ ಭಾರೀ ಸವಾಲು ಎದುರಿಸುವಂತಾಯಿತು. ಆರು ಪ್ರಯತ್ನಗಳ ಪೈಕಿ ನಾಲ್ಕು ಫೌಲ್ನಲ್ಲಿ ಕೊನೆಗೊಂಡವು. ಆದರೆ, ಮೂರನೇ ಪ್ರಯತ್ನವು ಕಂಚಿನ ಪದಕ ಗೆಲ್ಲಲು ನೆರವಾಯಿತು.
ಜಮೈಕಾದ ಸಮಂತಾ ಹಾಲ್(61.66 ಮೀ.)ಚಿನ್ನದ ಪದಕ ಜಯಿಸಿದರೆ, ಕೆನಡಾದ ಜುಲಿಯಾ ಟಂಕ್ಸ್(60.67 ಮೀ.)ಬೆಳ್ಳಿ ಪದಕ ಗೆದ್ದುಕೊಂಡರು.
ಕಂಚು ಭಾರತ ಗೆದ್ದಿರುವ 17ನೇ ಪದಕವಾಗಿದೆ. ಗೇಮ್ಸ್ನಲ್ಲಿ ಅತ್ಲೆಟಿಕ್ಸ್ಗಳು ಗೆದ್ದಿರುವ ನಾಲ್ಕನೇ ಪದಕ ಇದಾಗಿದೆ.
ಸೀಮಾ ಅವರ ಸಹ ಸ್ಪರ್ಧಿ ನಿಧಿ ರಾಣಿ ಸ್ವಲ್ಪದರಲ್ಲೇ ಪದಕ ವಂಚಿತರಾದರು. ಸ್ಪರ್ಧಾವಳಿ ಯುದ್ದಕ್ಕೂ ಸುಧಾರಿತ ಪ್ರದರ್ಶನ ನೀಡಿದ ನಿಧಿ ತನ್ನ ಮೂರನೇ ಪ್ರಯತ್ನದಲ್ಲಿ 57.10 ಮೀ.ದೂರಕ್ಕೆ ಡಿಸ್ಕಸ್ ಎಸೆದರು. ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾದರು.
ವೇಟ್ಲಿಫ್ಟಿಂಗ್ ಹಾಗೂ ಅತ್ಲೆಟಿಕ್ಸ್ ವಿಭಾಗಗಳಲ್ಲಿ ಭಾರತ ತಂಡವು ಬಹುತೇಕ ಪದಕಗಳನ್ನು ಗೆದ್ದುಕೊಂಡಿದೆ.
ಅತ್ಲೆಟಿಕ್ಸ್ ಹಾಗೂ ಪ್ಯಾರಾ ಅತ್ಲೆಟಿಕ್ಸ್ಗಳಲ್ಲಿ ಕ್ರೀಡಾಪಟುಗಳು ಎಂಟು ಪದಕಗಳ (2 ಚಿನ್ನ, 4 ಬೆಳ್ಳಿ, 2 ಕಂಚು)ಕೊಡುಗೆ ನೀಡಿದರೆ, ವೇಟ್ಲಿಫ್ಟಿಂಗ್ನಲ್ಲಿ ಕೂಡ ಎಂಟು ಪದಕಗಳು(1 ಚಿನ್ನ, 6 ಬೆಳ್ಳಿ ಹಾಗೂ 1 ಕಂಚು)ಬಂದಿವೆ. ಭಾರತದ ಉಳಿದ ಪದಕಗಳು ಪ್ಯಾರಾಲಿಫ್ಟಿಂಗ್ನಲ್ಲಿ ಬಂದಿದೆ.
ಸ್ವಲ್ಪದರಲ್ಲೇ ಪದಕ ವಂಚಿತ ಇತರ ಭಾರತೀಯರು: ಭಾರತವು ಗುರುವಾರದಂದು ಎರಡು ಪದಕಗಳನ್ನು ಗೆದ್ದುಕೊಂಡಿದ್ದರೂ ಇತರ ಹಲವು ಅತ್ಲೀಟ್ಗಳು ಸ್ವಲ್ಪದರಲ್ಲೇ ಪದಕ ವಂಚಿತರಾದರು.
ಮಹಿಳೆಯರ +86 ಕೆಜಿ ವೇಟ್ಲಿಫ್ಟಿಂಗ್ ಸ್ಪರ್ಧಾವಳಿಯಲ್ಲಿ ಒಟ್ಟು 245 ಕೆಜಿ ಎತ್ತಿ ಹಿಡಿದ ಮಾರ್ಟಿನಾ ದೇವಿ ಮೈಬಾಮ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಪುರುಷರ ಶಾಟ್ಪುಟ್ ಸ್ಪರ್ಧೆಯ ಫೈನಲ್ನಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ ಐದನೇ ಸ್ಥಾನ ಪಡೆದರೆ, ಭಾರತದ ಇನ್ನೋರ್ವ ಸ್ಪರ್ಧಿ ಸಮರ್ದೀಪ್ ಸಿಂಗ್ ಗಿಲ್ ಏಳನೇ ಸ್ಥಾನ ಪಡೆದರು.
ಇದೇ ವೇಳೆ ಭಾರತಕ್ಕೆ ಡೆಕಾಥ್ಲಾನ್ನಲ್ಲಿ ಪದಕ ಗೆಲ್ಲುವ ಉತ್ತಮ ಅವಕಾಶವಿದೆ. ತೇಜಸ್ವಿನ್ ಶಂಕರ್ ಮೊದಲ ದಿನ ಅತ್ಯುತ್ತಮ ಪ್ರದರ್ಶನ ನೀಡಿದರು. 4,339 ಅಂಕದೊಂದಿಗೆ ಎರಡನೇ ಸ್ಥಾನದೊಂದಿಗೆ ಮೊದಲ ದಿನ ಕೊನೆಗೊಳಿಸಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್ ಡಮೀಯನ್ ವಾರ್ನರ್(4,353 ಅಂಕ)ಅವರಿಂದ ಕೇವಲ 14 ಅಂಕಗಳಿಂದ ಹಿಂದುಳಿದರು.
ಎರಡನೇ ದಿನವಾದ ಶುಕ್ರವಾರ ನಡೆಯಲಿರುವ ಐದು ಸ್ಪರ್ಧೆಗಳಲ್ಲಿ ಡೆಕಾಥ್ಲಾನ್ನಲ್ಲಿ ಪದಕ ವಿಜೇತರು ಯಾರೆಂದು ನಿರ್ಣಯವಾಗಲಿದೆ.
ಪುರುಷರ ಜಾವೆಲಿನ್ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ, ರೋಹಿತ್ ಯಾದವ್ ಹಾಗೂ ಯಶ್ ವೀರ್ ಸಿಂಗ್ ಫೈನಲ್ಗೆ ತಲುಪಿದ್ದು ಪದಕದ ಭರವಸೆ ಮೂಡಿಸಿದ್ದಾರೆ.
ಪುರುಷರ ಟ್ರಿಪಲ್ ಜಂಪ್ ಕ್ವಾಲಿಫೈಯರ್ಸ್ನಲ್ಲಿ ಪ್ರವೀಣ್ ಚಿತ್ರವೇಲ್ ಹಾಗು ಸೆಲ್ವ ಪ್ರಭು ತಿರುಮಾರನ್ ಫೈನಲ್ಗೆ ಪ್ರವೇಶಿಸಿದ್ದಾರೆ.






