ಕಾಮನ್ವೆಲ್ತ್ ಗೇಮ್ಸ್ | ಟ್ರಿಪಲ್ ಜಂಪ್ ಫೈನಲ್ಗೆ ಪ್ರವೀಣ್ ಚಿತ್ರವೇಲ್, ಸೆಲ್ವ ಪ್ರಭು

ಪ್ರವೀಣ್ ಚಿತ್ರವೇಲ್ | Photo Credit : PTI
ಗ್ಲಾಸ್ಗೊ, ಜು. 30: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗುರುವಾರ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರವೀಣ್ ಚಿತ್ರವೇಲ್ ಮತ್ತು ಸೆಲ್ವ ಪ್ರಭು ಪುರುಷರ ಟ್ರಿಪಲ್ ಜಂಪ್ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಚಿತ್ರವೇಲ್ ತನ್ನ ಮೊದಲ ಮತ್ತು ಏಕೈಕ ಯತ್ನದಲ್ಲಿ 16.41 ಮೀಟರ್ ಜಿಗಿದು ಎರಡನೇ ಸ್ಥಾನ ಪಡೆದರು. ಶೀತ ಮತ್ತು ವೇಗದ ಗಾಳಿಯ ವಾತಾವರಣದ ಹಿನ್ನೆಲೆಯಲ್ಲಿ, ಕಣದಲ್ಲಿದ್ದ 14 ಸ್ಪರ್ಧಿಗಳ ಪೈಕಿ ಯಾರಿಗೂ ನೇರವಾಗಿ ಫೈನಲ್ಗೆ ಅರ್ಹತೆ ಗಿಟ್ಟಿಸುವ 16.60 ಮೀಟರ್ ಗುರುತನ್ನು ದಾಟಲು ಸಾಧ್ಯವಾಗಲಿಲ್ಲ. ಚಿತ್ರವೇಲ್ ತನ್ನ ಎರಡು ಮತ್ತು ಮೂರನೇ ಯತ್ನಗಳನ್ನು ಮಾಡಲಿಲ್ಲ. ಅವರ ಹೆಸರಿನಲ್ಲಿ 17.37 ಮೀಟರ್ ರಾಷ್ಟ್ರೀಯ ದಾಖಲೆಯಿದೆ. ಈ ಋತುವಿನಲ್ಲಿ ಅವರ ಅತ್ಯುತ್ತಮ ಸಾಧನೆ 17.08 ಮೀಟರ್.
ಅದೇ ವೇಳೆ, ಪ್ರಭು ತನ್ನ ಮೊದಲ ಎರಡು ಯತ್ನಗಳಲ್ಲಿ ‘ಫೌಲ್’ ಆಗುವ ಮೂಲಕ ಕೊಂಚ ಆತಂಕದಲ್ಲಿದ್ದರು. ಆದರೆ ತನ್ನ ಅಂತಿಮ ಯತ್ನದಲ್ಲಿ 16.26 ಮೀಟರ್ ಜಿಗಿದು ಮೂರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರು.
ಶನಿವಾರ ನಡೆಯಲಿರುವ ಫೈನಲ್ಗೆ ಅಗ್ರ 12 ಸ್ಪರ್ಧಿಗಳು ಅರ್ಹತೆ ಪಡೆದಿದ್ದಾರೆ.
ಈ ಋತುವಿನಲ್ಲಿ 17.69 ಮೀಟರ್ ಜಿಗಿದು ಅತ್ಯುತ್ತಮ ನಿರ್ವಹಣೆ ದಾಖಲಿಸಿರುವ ಜಮೈಕಾದ ಜೋರ್ಡಾನ್ ಸ್ಕಾಟ್, ತನ್ನ ಎರಡನೇ ಸುತ್ತಿನಲ್ಲಿ 16.56 ಮೀಟರ್ ಜಿಗಿದು ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು.
ವಿಶಾಲ್ಗೆ ಹಿನ್ನಡೆ
ಪುರುಷರ 400 ಮೀಟರ್ ಓಟದಲ್ಲಿ, ರಾಷ್ಟ್ರೀಯ ದಾಖಲೆ ಹೊಂದಿರುವ ವಿಶಾಲ್ ಟಿಕೆ ತನ್ನ ಸೆಮಿಫೈನಲ್ ಹೀಟ್ನಲ್ಲಿ 46.33 ಸೆಕೆಂಡುಗಳ ಸಾಧಾರಣ ಸಮಯದೊಂದಿಗೆ ಆರನೇ ಸ್ಥಾನಕ್ಕೆ ತೃಪ್ತಿಪಟ್ಟು, ಫೈನಲ್ ಹಂತಕ್ಕೇರಲು ವಿಫಲರಾಗಿದ್ದಾರೆ.
ವಿಶಾಲ್ ಮೇ ತಿಂಗಳಲ್ಲಿ ನಡೆದ ಫೆಡರೇಶನ್ ಕಪ್ನಲ್ಲಿ 44.98 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.






