ಕಾಮನ್ವೆಲ್ತ್ ಗೇಮ್ಸ್ 2026 | ಭಾರತಕ್ಕೆ ಮೊದಲ ಪದಕ : ಪ್ಯಾರಾ ಪವರ್ ಲಿಫ್ಟಿಂಗ್ ನಲ್ಲಿ ಜಂಡು ಕುಮಾರ್ ಗೆ ಕಂಚು

ಜಂಡು ಕುಮಾರ್ Photo: ANI
ಗ್ಲ್ಯಾಸ್ಗೋ: ಪುರುಷರ ಭಾರತೂಕದ ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಂಡು ಕುಮಾರ್ ಕಂಚು ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ 2026 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದರು. ಇದರೊಂದಿಗೆ 2ನೇ ದಿನದಲ್ಲಿ ಭಾರತಕ್ಕೆ ಮೊದಲ ಯಶಸ್ಸು ದೊರಕಿತು.
ಜಂಡು ಕುಮಾರ್ 181 ಕೆಜಿ ಮತ್ತು 190 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ 130.9 ಅಂಕಗಳನ್ನು ಗಳಿಸಿದರು. ಆದರೆ, ತಮ್ಮ ಅಂತಿಮ ಪ್ರಯತ್ನದ 196 ಕೆಜಿ ಭಾರವನ್ನು ಎತ್ತಲು ಅವರಿಗೆ ಸಾಧ್ಯವಾಗದ ಕಾರಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳಳಬೇಕಾಯಿತು.
ನೈಜೀರಿಯಾದ ಇದ್ರಿಸ್ ರಿಲುವಾನ್ 132.8 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಮ್ಯಾಥ್ಯೂ ಹಾರ್ಡಿಂಗ್ 131 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು.ಈ ಸ್ಪರ್ಧೆಯಲ್ಲಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಸುಧೀರ್ ಅವರು 114.1 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು.
28 ವರ್ಷದ ಜಂಡು ಕುಮಾರ್ ಅವರು ಪೋಲಿಯೋ, ಆರ್ಥಿಕ ಸಂಕಷ್ಟದಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದವರು. ಆರಂಭದಲ್ಲಿ ಹಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ಅಭ್ಯಾಸ ನಿರತರಾಗಿದ್ದರು. ಇದೀಗ ತಮ್ಮ ಪರಿಶ್ರಮವನ್ನು ಗೆಲುವಾಗಿ ಬದಲಾಯಿಸಿ ಭಾರತಕ್ಕೆ ಪದಕ ಗೆಲ್ಲಿಸಿಕೊಟ್ಟಿದ್ದಾರೆ.






