ಭಾರತದ ಮೇಲೆ ನಿರಂತರ ಒತ್ತಡ: ಎಚ್ಚರಿಕೆ ನೀಡಿದ ಪಾಕ್ ಕೋಚ್

ಮೈಕ್ ಹೆಸನ್ PC: x.com/Hesy_R0ck
ದುಬೈ: "ವಿಶ್ವದಲ್ಲಿ ಅಗ್ರ ರ್ಯಾಂಕಿಂಗ್ ಹೊಂದಿರುವ ಭಾರತದ ಮೇಲೆ ಸುಧೀರ್ಘ ಕಾಲ ಒತ್ತಡ ಹೇರಲು ನಾವು ಸಮರ್ಥರಿದ್ದೇವೆ. ನಾವು ಅವರನ್ನು ಒತ್ತಡದಲ್ಲಿ ಸಿಲುಕಿಸುತ್ತೇವೆ. ಇದು ನಮ್ಮ ಸವಾಲು" ಎಂದು ಪಾಕಿಸ್ತಾನ ತಂಡದ ಕೋಚ್ ಮೈಕ್ ಹೆಸನ್ ಹೇಳಿಕೆ ನೀಡಿದ್ದಾರೆ.
ಏಷ್ಯಾದ ಬದ್ಧ ಪ್ರತಿಸ್ಪರ್ಧಿಗಳು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗಲು ವೇದಿಕೆ ಸಜ್ಜಾದ ಬೆನ್ನಲ್ಲೇ ಮೈಕ್ ಹೆಸನ್ ನೀಡಿರುವ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಗುರುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 11 ರನ್ ಗಳ ರೋಚಕ ಜಯ ಸಾಧಿಸಿ ಫೈನಲ್ ನಲ್ಲಿ ಭಾರತವನ್ನು ಎದುರಿಸಲು ಅರ್ಹತೆ ಪಡೆದಿರುವ ಪಾಕಿಸ್ತಾನ ಟಿ20 ಇತಿಹಾಸದಲ್ಲೇ ಏಷ್ಯಾಕಪ್ ಗೆಲ್ಲುವ ಕನಸು ಕಾಣುತ್ತಿದೆ.
ಟೂರ್ನಿಯುದ್ದಕ್ಕೂ ಭಾರತ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದು, ಟೂರ್ನಿಯಲ್ಲಿ ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ. ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ಸೇನಾ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಭಾರತ- ಪಾಕಿಸ್ತಾನ ಪಂದ್ಯಗಳು ಕ್ರಿಕೆಟ್ ಗಿಂತ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾಗುತ್ತಿದೆ.
"ಆಟರಾರರು ಕ್ರಿಕೆಟ್ ಗೆ ಗಮನ ನೀಡಬೇಕೇ ವಿನಃ ವಿವಾದಗಳಿಗೆ ಅಲ್ಲ" ಎಂದು ಹೇಳಿದರು. ಮೊದಲ ಎರಡು ಪಂದ್ಯಗಳು ವಿವಾದಕ್ಕೆ ಗುರಿಯಾಗಿದ್ದವು. ಮೊದಲ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ರಾಜಕೀಯ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ಶಹೀಬ್ಝಾದ ಫರ್ಹಾನ್ ಹಾಗೂ ರವೂಫ್ ಆಕ್ರಮಣಕಾರಿ ಸಂಜ್ಞೆ ನೀಡಿದ್ದರು ಎಂದು ದೂರಲಾಗಿತ್ತು.
"ಆಟಗಾರರು ಕೇವಲ ಕ್ರಿಕೆಟ್ ನತ್ತ ಗಮನಹರಿಸಬೇಕು. ಖಂಡಿತವಾಗಿಯೂ ನಾವು ಅದನ್ನು ಮಾಡುತ್ತಿದ್ದೇವೆ. ಅಧಿಕ ಒತ್ತಡದ ಪಂದ್ಯಗಳಲ್ಲಿ ಆಟಗಾರರು ಕೆಲ ಸಂಜ್ಞೆಗಳನ್ನು ಮಾಡುವುದು ಸಹಯ" ಎಂದು ಹೇಸನ್ ಅಭಿಪ್ರಾಯಪಟ್ಟಿದ್ದಾರೆ.
2022ರಿಂದೀಚೆಗೆ ಉಭಯ ದೇಶಗಳ ಹಣಾಹಣಿಯಲ್ಲಿ ಭಾರತ ಎಲ್ಲ ಏಳು ಪಂದ್ಯಗಳನ್ನು ಗೆದ್ದಿದೆ. ಸತತವಾಗಿ ಮೂರು ಏಕದಿನ ಪಂದ್ಯ ಹಾಗೂ ನಾಲ್ಕು ಟಿ20 ಪಂದ್ಯಗಳನ್ನು ಪಾಕಿಸ್ತಾನದ ವಿರುದ್ಧ ಗೆದ್ದು ಅಜೇಯ ದಾಖಲೆ ಹೊಂದಿದೆ.







