ಕೂಚ್ ಬೆಹಾರ್ ಎಲಿಟ್ ಅಂಡರ್-19 ಟ್ರೋಫಿ; ಕರ್ನಾಟಕದ ಗೆಲುವಿಗೆ 159 ರನ್ ಗುರಿ

ಅಕ್ಷತ್ ಪ್ರಭಾಕರ್, ಈಸಾ ಪುತ್ತಿಗೆ
ಬೆಂಗಳೂರು, ನ. 18: ಕೂಚ್ ಬೆಹಾರ್ ಎಲಿಟ್ ಅಂಡರ್-19 ಟ್ರೋಫಿ ಪಂದ್ಯಾವಳಿಯಲ್ಲಿ, ಮಂಗಳವಾರ ಉತ್ತರಾಖಂಡ ತಂಡವು ಕರ್ನಾಟಕದ ಗೆಲುವಿಗೆ 159 ರನ್ಗಳ ಗುರಿಯನ್ನು ನೀಡಿದೆ. ಗುರಿಯನ್ನು ಬೆನ್ನತ್ತಿರುವ ಕರ್ನಾಟಕ ತನ್ನ ಎರಡನೇ ಇನಿಂಗ್ಸ್ ನಲ್ಲಿ ಮೂರನೇ ದಿನದಾಟದ ಕೊನೆಗೆ ಏಳು ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 44 ರನ್ಗಳನ್ನು ಗಳಿಸಿದೆ. ಕೊನೆ ದಿನವಾದ ಬುಧವಾರ ಪಂದ್ಯವನ್ನು ಗೆಲ್ಲಲು ಕರ್ನಾಟಕ 115 ರನ್ಗಳನ್ನು ಗಳಿಸಬೇಕಾಗಿದೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಕರ್ನಾಟಕವು ಅಕ್ಷತ್ ಪ್ರಭಾಕರ್ರ ಐದು ವಿಕೆಟ್ಗಳು ಮತ್ತು ಈಸಾ ಪುತ್ತಿಗೆ ಅವರ ಎರಡು ವಿಕೆಟ್ಗಳ ನೆರವಿನಿಂದ ಉತ್ತರಾಖಂಡ ತಂಡದ ಎರಡನೇ ಇನಿಂಗ್ಸನ್ನು 191 ರನ್ಗಳಿಗೆ ನಿಯಂತ್ರಿಸಿತು. ಅಕ್ಷತ್ ಪ್ರಭಾಕರ್ 16 ಓವರ್ ಗಳಲ್ಲಿ 20 ರನ್ಗಳನ್ನು ಕೊಟ್ಟು ಐದು ವಿಕೆಟ್ ಗಳನ್ನು ಉರುಳಿಸಿದರು. ಈಸಾ ಪುತ್ತಿಗೆ 17 ಓವರ್ಗಳಲ್ಲಿ 35 ರನ್ಗಳನ್ನು ನೀಡಿ ಎರಡು ವಿಕೆಟ್ಗಳನ್ನು ಪಡೆದರು.
ಉತ್ತರಾಖಂಡದ ಪರವಾಗಿ ರಕ್ಷಿತ್ ದಳಕೋಟಿ 88 ರನ್ಗಳನ್ನು ಗಳಿಸಿ ತಂಡದ ಗರಿಷ್ಠ ಸ್ಕೋರ್ ದಾರರಾದರು. ಉಳಿದಂತೆ ಭವ್ಯ 30, ನಾಯಕ ಆಯುಶ್ ದೇಸ್ವಾಲ್ 30 ರನ್ ಗಳ ಕೊಡುಗೆ ನೀಡಿದರು.
ಗೆಲುವಿಗೆ 159 ರನ್ ಗಳ ಗುರಿಯನ್ನು ಪಡೆದ ಕರ್ನಾಟಕ ಮೂರನೇ ದಿನದಾಟದ ಕೊನೆಗೆ ಒಂದು ವಿಕೆಟ್ ಕಳೆದುಕೊಂಡು 44 ರನ್ ಗಳಿಸಿದೆ.
18 ರನ್ ಗಳಿಸಿರುವ ನಿತೀಶ್ ಆರ್ಯ ಎಲ್. ಮತ್ತು 22 ರನ್ ಗಳಿಸಿರುವ ಧ್ರುವ ಕೃಷ್ಣನ್ ಕ್ರೀಸ್ ನಲ್ಲಿದ್ದಾರೆ.





