FIFA World Cupಗೆ ಕ್ಷಣಗಣನೆ : ಫಿಫಾ ಇತಿಹಾಸದ ಅತಿದೊಡ್ಡ ಪಂದ್ಯಾವಳಿಗೆ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯ

Photo Credit : @FIFAcom
ಮೆಕ್ಸಿಕೊ ಸಿಟಿ, ಜೂ.10: ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ಗುರುವಾರ(ಜೂನ್ 11)ದಿಂದ ಅರಂಭವಾಗುತ್ತಿದೆ. ಇದೇ ಮೊದಲ ಬಾರಿ ಮೂರು ರಾಷ್ಟ್ರಗಳಾದ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳು ಜಂಟಿಯಾಗಿ ಈ ಕ್ರೀಡಾಹಬ್ಬವನ್ನು ಆಯೋಜಿಸುತ್ತಿವೆ.
23ನೇ ಆವೃತ್ತಿಯ ಫಿಫಾ ಪುರುಷರ ವಿಶ್ವಕಪ್ ಟೂರ್ನಿಯು ಜೂನ್ 11ರಿಂದ ಜೂ.19ರ ತನಕ (ಭಾರತೀಯ ಕಾಲಮಾನದಲ್ಲಿ ಜೂನ್ 12ರಿಂದ ಜುಲೈ 20)ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳ 16 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಈ ಬಾರಿ ತಂಡಗಳ ಸಂಖ್ಯೆಯನ್ನು 32ರಿಂದ 48ಕ್ಕೆ ವಿಸ್ತರಿಸಲಾಗಿದ್ದು ಇದು ಸ್ಪರ್ಧಾವಳಿಯ ಇಡೀ ಲಯವನ್ನು ಬದಲಾಯಿಸಲಿದೆ. ಫೈನಲ್ ಸೇರಿದಂತೆ ಒಟ್ಟು 104 ಪಂದ್ಯಗಳು ನಡೆಯಲಿವೆ.
ಈ ಬಾರಿಯ ವಿಶ್ವಕಪ್ ಫಿಫಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಂದ್ಯಾವಳಿಯಾಗಿದೆ. ಈ ಬೃಹತ್ ಟೂರ್ನಮೆಂಟ್ನಲ್ಲಿ 1,000ಕ್ಕೂ ಅಧಿಕ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ. 2026ರ ಆವೃತ್ತಿಯ ಟೂರ್ನಿಯಲ್ಲಿ ಹಿಂದಿನ ಫಿಫಾ ವಿಶ್ವಕಪ್ ಆವೃತ್ತಿಗಿಂತಲೂ ಹೆಚ್ಚು ತಂಡಗಳು, ಆಟಗಾರರು ಹಾಗೂ ಪಂದ್ಯಗಳು ಒಳಗೊಂಡಿವೆ.
‘ಎ’ ಗುಂಪಿನಿಂದ ‘ಎಲ್’ ಗುಂಪಿನ ತನಕ ಒಟ್ಟು 12 ಗುಂಪುಗಳು ಇರುತ್ತವೆ. ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿರುತ್ತವೆ.
ಪ್ರತೀ ಗುಂಪಿನಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುತ್ತವೆ. ಹೀಗೆ ಒಟ್ಟು 24 ತಂಡಗಳು ಮುಂದಿನ ಸುತ್ತಿಗೇರಲಿವೆ.
ಮೂರನೇ ಸ್ಥಾನ ಪಡೆದ ಎಲ್ಲ 12 ತಂಡಗಳನ್ನು ಪಂದ್ಯಾವಳಿಯಲ್ಲಿ ಗಳಿಸಿದ ಅಂಕಗಳು, ಗೋಲು ವ್ಯತ್ಯಾಸ ಹಾಗೂ ಗೋಲು ಗಳಿಸಿದ ಆಧಾರದಲ್ಲಿ ಹೋಲಿಕೆ ಮಾಡಲಾಗುತ್ತದೆ. ಅವುಗಳಲ್ಲಿನ ಶ್ರೇಷ್ಠ ಎಂಟು ತಂಡಗಳು ಮಾತ್ರ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಒಟ್ಟು 32 ತಂಡಗಳು ನಾಕೌಟ್ ಹಂತಕ್ಕೆ ಲಗ್ಗೆ ಇಡುತ್ತವೆ.
ಅಂತಿಮ-32ರ ಸುತ್ತಿನಲ್ಲಿ ಗೆಲ್ಲುವ ತಂಡಗಳು ಅಂತಿಮ-16ರ ಸುತ್ತಿಗೇರುತ್ತವೆ. ಅ ನಂತರ ಕ್ಟಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಅಂತಿಮವಾಗಿ ಫೈನಲ್ ಹಂತಕ್ಕೆ ತಲುಪುತ್ತವೆ.
2022ರಲ್ಲಿ ಖತರ್ನಲ್ಲಿ ಟ್ರೋಫಿ ಗೆದ್ದಿರುವ ಅರ್ಜೆಂಟೀನ ಹಾಲಿ ಚಾಂಪಿಯನ್ ತಂಡವಾಗಿದೆ. ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನ ತಂಡವು ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 4-2 ಅಂತರದಿಂದ ಜಯಶಾಲಿಯಾಗಿತ್ತು. ಉಭಯ ತಂಡಗಳು ಹೆಚ್ಚುವರಿ ಸಮಯದಲ್ಲಿ 3-3ರಿಂದ ಸಮಬಲ ಸಾಧಿಸಿದ್ದಾಗ ಪೆನಾಲ್ಟಿ ಮೊರೆ ಹೋಗಲಾಗಿತ್ತು.
ವಿಶ್ವಕಪ್ ಗೆದ್ದ ನಂತರ ಅರ್ಜೆಂಟೀನ ತಂಡವು ಕೊಪಾ ಅಮೆರಿಕ ಪ್ರಶಸ್ತಿಯನ್ನು ಜಯಿಸಿದೆ. ಈ ಬಾರಿಯ ವಿಶ್ವಕಪ್ನಲ್ಲಿ ‘ಜೆ ’ಗುಂಪಿನಲ್ಲಿ ಆಸ್ಟ್ರೀಯ, ಅಲ್ಜೇರಿಯ ಹಾಗೂ ಜೋರ್ಡನ್ ತಂಡದೊಂದಿಗೆ ಸ್ಥಾನ ಪಡೆದಿರುವ ಅರ್ಜೆಂಟೀನ ಅಂತಿಮ-32ರ ಸುತ್ತಿಗೇರುವ ಫೇವರಿಟ್ ತಂಡವಾಗಿದೆ. ಸತತ ಎರಡನೇ ಪ್ರಶಸ್ತಿ ಗೆದ್ದ ಮೂರನೇ ತಂಡವಾಗುವ ವಿಶ್ವಾಸದಲ್ಲಿದೆ.
ಮೆಕ್ಸಿಕೊ-ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯ
ಮೆಕ್ಸಿಕೊ ಸಿಟಿಯ ಎಸ್ಡಾಡಿಯೊ ಅಜ್ಟೆಕಾ ಸ್ಟೇಡಿಯಂನಲ್ಲಿ ಗುರುವಾರ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಈ ಪಂದ್ಯವು ಭಾರತೀಯ ಕಾಲಮಾನ ಮುಂಜಾನೆ 12:30ಕ್ಕೆ ಆರಂಭವಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ಹಾಗೂ ಝೆಕಿಯಾ ತಂಡಗಳು ಸೆಣಸಾಡಲಿವೆ.
ಮೆಸ್ಸಿ-ರೊನಾಲ್ಡೊ ಮುಖಾಮುಖಿಯಾಗುವ ಸಾಧ್ಯತೆ?
ದಾಖಲೆಯ ಆರನೇ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಜ್ಜಾಗಿರುವ ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಪಂದ್ಯಪೂರ್ವ ಸೌಹಾರ್ದ ಪಂದ್ಯಗಳನ್ನು ಜಯಿಸಿರುವ ಅರ್ಜೆಂಟೀನ ಹಾಗೂ ಪೋರ್ಚುಗಲ್ ತಂಡಗಳು ಉತ್ತರ ಅಮೆರಿಕಕ್ಕೆ ಆತ್ಮವಿಶ್ವಾಸದೊಂದಿಗೆ ಆಗಮಿಸಿವೆ. ಮೆಸ್ಸಿ ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿದ್ದರೆ, ರೊನಾಲ್ಡೊ ಸಂಪೂರ್ಣ ಫಿಟ್ ಇದ್ದು, ಪೋರ್ಚುಗಲ್ ತಂಡದ ಸವಾಲನ್ನು ಮುನ್ನಡೆಸುವ ನಿರೀಕ್ಷೆ ಇದೆ.
ರೊನಾಲ್ಡೊ ಹಾಗೂ ಮೆಸ್ಸಿ ಮುಖಾಮುಖಿಯು ಫಿಫಾದ ಹೊಸದಾಗಿ ವಿಸ್ತರಿಸಲಾದ 48 ತಂಡಗಳ ಸ್ವರೂಪದಲ್ಲಿ ತೆರೆದುಕೊಳ್ಳುವ ಫಲಿತಾಂಶಗಳ ಸರಣಿ, ನಾಕೌಟ್ ಮಾರ್ಗಗಳು ಹಾಗೂ ಅರ್ಹತಾ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ.
ಒಟ್ಟು 143 ಗೋಲುಗಳನ್ನು ಗಳಿಸಿರುವ ರೊನಾಲ್ಡೊ ಪುರುಷರ ಅಂತರ್ರಾಷ್ಟ್ರೀಯ ಫುಟ್ಬಾಲ್ನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿದ್ದಾರೆ. ಯುರೋಪಿಯನ್ ಚಾಂಪಿಯನ್ಶಿಪ್ ಹಾಗೂ ಎರಡು ಯುಇಎಫ್ಎ ನೇಶನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ವಿಶ್ವಕಪ್ ಟ್ರೋಫಿ ಮಾತ್ರ ಕೈಗೆಟುಕಿಲ್ಲ. ರೊನಾಲ್ಡೊ ಯುಗದಲ್ಲಿ ಪೋರ್ಚುಗಲ್ನ ಶ್ರೇಷ್ಠ ಸಾಧನೆ 2006ರಲ್ಲಿ ಹೊರಹೊಮ್ಮಿತ್ತು. ಆಗ ಅದು ಸೆಮಿ ಫೈನಲ್ಗೆ ತಲುಪಿತ್ತು. 2014ರಲ್ಲಿ ಗ್ರೂಪ್ ಹಂತದಲ್ಲಿ ಹೊರಬಿದ್ದಿದ್ದ ಪೋರ್ಚುಗಲ್ ತಂಡವು 2022ರಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿತ್ತು. ಆಗ ಅದು ಮೊರಾಕ್ಕೊ ತಂಡಕ್ಕೆ ಸೋತಿತ್ತು.
ವೈಯಕ್ತಿಕವಾಗಿ ಮೆಸ್ಸಿ ಅವರು 26 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಒಟ್ಟು 13 ಗೋಲುಗಳನ್ನು ಗಳಿಸಿದ್ದಾರೆ. ರೊನಾಲ್ಡೊ 22 ವಿಶ್ವಕಪ್ ಪಂದ್ಯಗಳನ್ನಾಡಿದ್ದು, ಎಂಟು ಗೋಲುಗಳನ್ನು ಗಳಿಸಿದ್ದಾರೆ. ಉಭಯ ಆಟಗಾರರು ಆರನೇ ವಿಶ್ವಕಪ್ ಆಡುವ ನಿರೀಕ್ಷೆ ಇದೆ. ಮೆಸ್ಸಿ ವಿಶ್ವಕಪ್ನಲ್ಲಿ ಆಡುವುದು ಇನ್ನೂ ಧೃಢಪಟ್ಟಿಲ್ಲ.
ವಿಶ್ವಕಪ್ ಮುನ್ನವೇ ಅಭಿಮಾನಿಗಳಿಗೆ ಹತಾಶೆ
ಇತಿಹಾಸದಲ್ಲಿಯೇ ಅತಿ ದೊಡ್ಡ ವಿಶ್ವಕಪ್ ಟೂರ್ನಿ ಆರಂಭವಾಗುವ ಮೊದಲೇ ಅನೇಕ ಫುಟ್ಬಾಲ್ ಅಭಿಮಾನಿಗಳು ಹತಾಶರಾಗಿದ್ದಾರೆ.
ಅತಿಯಾದ ಟಿಕೆಟ್ ಬೆಲೆಗಳು, ಕಟ್ಟುನಿಟ್ಟಾದ ಪ್ರಯಾಣ ನಿಷೇಧಗಳು ಹಾಗೂ ವೀಸಾ ವಿಳಂಬಗಳು, ಗಗನಕ್ಕೇರುತ್ತಿರುವ ಸಾರ್ವಜನಿಕ ಸಾರಿಗೆ ವೆಚ್ಚಗಳು ಇವೆಲ್ಲವೂ ಹಬ್ಬದ ವಾತಾವರಣ ನಿರ್ಮಿಸುವಲ್ಲಿ ನೆರವಾಗಿಲ್ಲ.
ವಾರಗಳ ಅನಿಶ್ಚಿತತೆಯ ನಂತರ ಇರಾನ್ ಆಟಗಾರರಿಗೆ ಕಳೆದ ಶುಕ್ರವಾರ ಅಮೆರಿಕದ ವೀಸಾಗಳನ್ನು ನೀಡಲಾಯಿತು. ಪ್ರಮುಖ ವ್ಯವಸ್ಥಾಪಕ ಹಾಗೂ ಆಡಳಿತಾತ್ಮಕ ಸದಸ್ಯರು ಸೇರಿದಂತೆ ತಂಡದ ಹಲವಾರು ಸದಸ್ಯರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಇರಾನ್ ಫುಟ್ಬಾಲ್ ಫೆಡರೇಶನ್ ಬಹಿರಂಗಪಡಿಸಿದೆ.
ಇರಾನ್ ತಂಡವು ಈ ವಾರ ಬಿಗಿ ಭದ್ರತೆಯ ನಡುವೆ ಮೆಕ್ಸಿಕೊ ತಲುಪಿದೆ.






