FIFA ವಿಶ್ವಕಪ್ ಫೈನಲ್ ನಲ್ಲಿ ಸ್ಪೇನ್–ಅರ್ಜೆಂಟೀನಾ ಮಹಾಸಮರಕ್ಕೆ ಕ್ಷಣಗಣನೆ; ಟ್ರಂಪ್ ಹಾಜರಾತಿಯಿಂದ ಕಠಿಣ ಭದ್ರತೆ

Photo Credit :X/@FIFAWorldCup
ನ್ಯೂಯಾರ್ಕ್: ಯುರೋಪ್ ಚಾಂಪಿಯನ್ ಸ್ಪೇನ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ರವಿವಾರ ನಡೆಯಲಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಂದ್ಯ ವೀಕ್ಷಣೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣ ಹಾಗೂ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ವಿಶ್ವಕಪ್ ಫೈನಲ್ನಲ್ಲಿ ಯುರೋಪ್ ಹಾಗೂ ದಕ್ಷಿಣ ಅಮೆರಿಕದ ಹಾಲಿ ಚಾಂಪಿಯನ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ. ವಿಶ್ವ ಚಾಂಪಿಯನ್ ಅರ್ಜೆಂಟೀನಾ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. 1962ರಲ್ಲಿ ಬ್ರೆಝಿಲ್ ಬಳಿಕ ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಮೊದಲ ಪುರುಷರ ತಂಡ ಎಂಬ ದಾಖಲೆ ನಿರ್ಮಿಸುವ ಅವಕಾಶವೂ ಅರ್ಜೆಂಟೀನಾಕ್ಕಿದೆ.
ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ವಿಶ್ವಕಪ್ ನಾಕೌಟ್ ಹಂತದಲ್ಲಿ ಒಂದೂ ಗೋಲು ದಾಖಲಿಸಿರದ ಮೆಸ್ಸಿ, ಬಳಿಕ ಆ ಕೊರತೆಯನ್ನು ಸಂಪೂರ್ಣವಾಗಿ ನೀಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಅವರ ವಿಶ್ವಕಪ್ ವೃತ್ತಿಜೀವನದ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿದೆ.
ಈ ಬಾರಿ ಮೆಸ್ಸಿ ಎದುರು ಸ್ಪೇನ್ನ ಯುವ ತಾರೆ ಲ್ಯಾಮಿನ್ ಯಮಾಲ್ ನಿಲ್ಲಲಿದ್ದಾರೆ. ಬಾಲ್ಯದಲ್ಲಿ ಮೆಸ್ಸಿ ಯಮಾಲ್ ಅವರನ್ನು ತೊಟ್ಟಿಲಲ್ಲಿ ಹಿಡಿದಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈಗ ಇಬ್ಬರೂ ವಿಶ್ವಕಪ್ ಫೈನಲ್ ನಲ್ಲಿ ಎದುರಾಳಿಗಳಾಗಿ ಕಣಕ್ಕಿಳಿಯುತ್ತಿರುವುದು ವಿಶೇಷ ಕುತೂಹಲ ಮೂಡಿಸಿದೆ. ಯಮಾಲ್ ಪಂದ್ಯಾವಳಿಯಲ್ಲಿ ಮೆಸ್ಸಿಯಷ್ಟೇ ಪ್ರಭಾವ ಬೀರದಿದ್ದರೂ, ಅದು ಎರಡೂ ತಂಡಗಳ ಆಟದ ಶೈಲಿಯ ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ.
ಯುರೋಪಿಯನ್ ಕ್ಲಬ್ ಚಾಂಪಿಯನ್ ಪ್ಯಾರಿಸ್ ಸೇಂಟ್-ಜರ್ಮೈನ್ ನಂತೆ ಸ್ಪೇನ್ ತಂಡವು ವೈಯಕ್ತಿಕ ಆಟಕ್ಕಿಂತ ತಂಡದ ಸಮೂಹ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಿದೆ. ಮತ್ತೊಂದೆಡೆ ಅರ್ಜೆಂಟೀನಾ ಅನುಭವಿ ಮೆಸ್ಸಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಉಳಿದ ಆಟಗಾರರ ಸಾಮೂಹಿಕ ಸಹಕಾರದ ಮೂಲಕ ಯಶಸ್ಸು ಸಾಧಿಸುತ್ತಿದೆ. ಈ ಎರಡೂ ಮಾದರಿಗಳು ಯಶಸ್ಸು ಸಾಧಿಸಿರುವುದು ಶ್ರೇಷ್ಠ ತಂಡವನ್ನು ಕಟ್ಟಲು ಒಂದೇ ಮಾರ್ಗವಿಲ್ಲ ಎಂಬುದನ್ನು ತೋರಿಸಿದೆ.
2014ರಿಂದ 2022ರವರೆಗೆ ಪ್ರಮುಖ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದಿದ್ದ ಸ್ಪೇನ್, ಕೋಚ್ ಲೂಯಿಸ್ ಡೆ ಲಾ ಫ್ಯುಯೆಂಟೆ ಮಾರ್ಗದರ್ಶನದಲ್ಲಿ ಪುನರುಜ್ಜೀವನ ಕಂಡಿದೆ. ಯುರೋ–2024ರಲ್ಲಿ ಹಾಲಿ ಚಾಂಪಿಯನ್ ಇಟಲಿ, ಆತಿಥೇಯ ಜರ್ಮನಿ ಹಾಗೂ ಪ್ರಮುಖ ತಂಡಗಳಾದ ಫ್ರಾನ್ಸ್ ಮತ್ತು ಇಂಗ್ಲೆಂಡ್ ಗಳನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದ ಸ್ಪೇನ್, ಈ ವಿಶ್ವಕಪ್ ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದೆ. ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧದ ಪ್ರಭಾವಿ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ.
ಫೈನಲ್ಗೆ ಸಾಗುವ ಹಾದಿಯಲ್ಲಿ ಸ್ಪೇನ್ ಕಠಿಣ ಸವಾಲುಗಳನ್ನು ಎದುರಿಸಿದೆ. ಅರ್ಜೆಂಟೀನಾ ಕೆಲ ಪಂದ್ಯಗಳಲ್ಲಿ ಅಲ್ಪ ಅಂತರದ ಗೆಲುವು ಸಾಧಿಸಿದ್ದರೂ ತನ್ನ ಸ್ಥಿರತೆಯನ್ನು ಉಳಿಸಿಕೊಂಡಿದೆ. ಸ್ಪೇನ್ ಸತತ 37 ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಅರ್ಜೆಂಟೀನಾ ಸತತ 14 ಪಂದ್ಯಗಳನ್ನು ಗೆದ್ದಿದ್ದು, ಕಳೆದ 37 ಪಂದ್ಯಗಳಲ್ಲಿ 31ರಲ್ಲಿ ಜಯ ದಾಖಲಿಸಿದೆ.
ಎರಡೂ ತಂಡಗಳು ಅತ್ಯುತ್ತಮ ಲಯದಲ್ಲಿದ್ದು, ವಿಶ್ವ ಫುಟ್ಬಾಲ್ ನ ಎರಡು ಬಲಿಷ್ಠ ತಂಡಗಳ ನಡುವಿನ ಈ ಫೈನಲ್ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಒಂದೆಡೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಅರ್ಜೆಂಟೀನಾ ಕಣಕ್ಕಿಳಿದಿದ್ದರೆ, ಮತ್ತೊಂದೆಡೆ ದೀರ್ಘ ವಿರಾಮದ ಬಳಿಕ ವಿಶ್ವಕಪ್ ಗೆದ್ದು ಹೊಸ ಅಧ್ಯಾಯ ಆರಂಭಿಸಲು ಸ್ಪೇನ್ ಸಜ್ಜಾಗಿದೆ. ವಿಶ್ವಕಪ್ ಫೈನಲ್ ನಲ್ಲಿ ಸೋಲಿನ ನಿರಾಸೆ ಅತ್ಯಂತ ತೀವ್ರವಾಗಿರುವುದರಿಂದ, ಎರಡೂ ತಂಡಗಳು ಗೆಲುವಿಗಾಗಿ ಸರ್ವಸ್ವವನ್ನೂ ಪಣಕ್ಕಿಡುವ ಸಾಧ್ಯತೆ ಇದೆ.
ಪಂದ್ಯ ಆರಂಭ: ಭಾರತೀಯ ಕಾಲಮಾನ ಪ್ರಕಾರ ಸೋಮವಾರ ರಾತ್ರಿ 12.30ಕ್ಕೆ.






