ಸ್ಯಾಂಡ್ ಪೇಪರ್ ಹಗರಣ: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಪ್ರತಿಯೊಬ್ಬರಿಗೂ ಅಕ್ರಮದ ಮಾಹಿತಿ ಇತ್ತು!; ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಸ್ಫೋಟಕ ಆರೋಪ

ಉಸ್ಮಾನ್ ಖ್ವಾಜಾ (Photo: India Today)
ಸಿಡ್ನಿ: ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಆಸ್ಟ್ರೇಲಿಯಾದ ಸ್ಯಾಂಡ್ ಪೇಪರ್ ಹಗರಣಕ್ಕೆ ಎಂಟು ವರ್ಷಗಳ ಬಳಿಕ ಮತ್ತೆ ಜೀವ ಬಂದಿದೆ. 2018ರ ಕೇಪ್ಟೌನ್ ಟೆಸ್ಟ್ ನಲ್ಲಿ ನಡೆದ ಚೆಂಡು ವಿರೂಪ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ತಂಡದ ಎಲ್ಲ ಆಟಗಾರರಿಗೂ ಮೊದಲೇ ತಿಳಿದಿತ್ತು. ಅಷ್ಟೇ ಅಲ್ಲ, ಕೇಪ್ಟೌನ್ ಟೆಸ್ಟ್ ಗೂ ಹಿಂದಿನ ಪಂದ್ಯದಲ್ಲೂ ಸ್ಯಾಂಡ್ ಪೇಪರ್ ಬಳಸಲಾಗಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಹೊಸ ಆರೋಪ ಮಾಡಿದ್ದಾರೆ.
ತಮ್ಮ ಆತ್ಮಕಥೆ ‘ಸಬ್ರ್’ ಪುಸ್ತಕದಲ್ಲಿ ಈ ವಿವಾದದ ಹಿಂದಿನ ಸಂಗತಿಗಳನ್ನು ಬಹಿರಂಗಪಡಿಸಲಿರುವ ಖ್ವಾಜಾ ಅವರ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಪ್ರಕರಣದ ಕುರಿತು ಈವರೆಗೆ ಲಭ್ಯವಾದ ಎಲ್ಲ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಈ ಸಂಬಂಧ ನಡೆಸಿದ ಆಂತರಿಕ ತನಿಖೆಯ ತೀರ್ಮಾನಗಳ ಬಗ್ಗೆ ಈಗಲೂ ವಿಶ್ವಾಸವಿದೆ ಎಂದು ಹೇಳಿದೆ.
‘2018ರ ಕೇಪ್ ಟೌನ್ ಟೆಸ್ಟ್ ನಡೆದ ಎಂಟು ವರ್ಷಗಳಲ್ಲಿ ಈ ಪ್ರಕರಣದ ಕುರಿತು ಸಾಕಷ್ಟು ಊಹಾಪೋಹಗಳು ಮತ್ತು ಮಾಧ್ಯಮ ವರದಿಗಳು ಬಂದಿವೆ. ಸಂಬಂಧಿತ ಮಾಹಿತಿ ಇದ್ದವರು ಅದನ್ನು ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಲು ಈ ಅವಧಿಯಲ್ಲಿ ಅವಕಾಶವಿತ್ತು. ಈ ಅವಕಾಶ ಈಗಲೂ ಮುಕ್ತವಾಗಿದೆ. ನಮ್ಮ ಗಮನಕ್ಕೆ ಬಂದ ಎಲ್ಲ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿದ್ದೇವೆ. ಸಮಗ್ರತಾ ತನಿಖೆಯ ತೀರ್ಮಾನಗಳ ಬಗ್ಗೆ ನಮಗೆ ವಿಶ್ವಾಸವಿದೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
‘ಈ ಪ್ರಕರಣದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವು. ಕೇವಲ ಬ್ಯಾಟರ್ ಗಳು, ಬೌಲರ್ ಗಳು ಅಥವಾ ಸಿಬ್ಬಂದಿಗೆ ಮಾತ್ರ ಈ ಬಗ್ಗೆ ತಿಳಿದಿತ್ತು ಎಂದಲ್ಲ. ಇಡೀ ತಂಡಕ್ಕೆ ಇದರ ಮಾಹಿತಿ ಇತ್ತು’ ಎಂದು ಖ್ವಾಜಾ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಪುಸ್ತಕ ಬಿಡುಗಡೆಗೂ ಮುನ್ನ 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ವರದಿ ಮಾಡಿದೆ.
ಸ್ಮಿತ್, ವಾರ್ನರ್ಗೆ ಒಂದು ವರ್ಷ ನಿಷೇಧ
ಈವರೆಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಆಗಿನ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಬ್ಯಾಟರ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡಿನ ಮೇಲ್ಮೈ ಉಜ್ಜುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳು ಬಹಿರಂಗವಾಗುತ್ತಿದ್ದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತೀವ್ರ ಮುಜುಗರಕ್ಕೆ ಒಳಗಾಗಿತ್ತು.
ಪ್ರಕರಣದ ಹಿನ್ನೆಲೆಯಲ್ಲಿ ಸ್ಮಿತ್ ಮತ್ತು ವಾರ್ನರ್ಗೆ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ಆಡುವುದರಿಂದ ಒಂದು ವರ್ಷ ನಿಷೇಧ ವಿಧಿಸಲಾಗಿತ್ತು. ಬ್ಯಾಂಕ್ರಾಫ್ಟ್ಗೆ ಒಂಭತ್ತು ತಿಂಗಳ ನಿಷೇಧ ಹೇರಲಾಗಿತ್ತು.
ಇದರ ಜತೆಗೆ, ಸ್ಮಿತ್ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸದಂತೆ ನಿರ್ಬಂಧಿಸಲಾಗಿತ್ತು. ವಾರ್ನರ್ ಗೆ ಅಂತಾರಾಷ್ಟ್ರೀಯ ಮತ್ತು ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ನಲ್ಲಿ ನಾಯಕತ್ವ ವಹಿಸುವುದಕ್ಕೆ ಜೀವಾವಧಿ ನಿಷೇಧ ವಿಧಿಸಲಾಗಿತ್ತು. ಆದರೆ, 2024ರಲ್ಲಿ ವಾರ್ನರ್ ಮೇಲಿನ ಈ ನಿರ್ಬಂಧವನ್ನು ರದ್ದುಗೊಳಿಸಲಾಯಿತು.
ಎಂಟು ವರ್ಷಗಳ ಬಳಿಕವೂ ಸತ್ಯದ ಹುಡುಕಾಟ
ಈ ಪ್ರಕರಣದ ಕುರಿತು ತಾವೇ ಮುಂದೆ ಬಂದು ಸತ್ಯವನ್ನು ಬಹಿರಂಗಪಡಿಸುವುದು ತಮ್ಮ ಇಚ್ಛೆಯಾಗಿರಲಿಲ್ಲ ಎಂದು ಖ್ವಾಜಾ ಹೇಳಿದ್ದಾರೆ.
‘ಆದರ್ಶ ಪರಿಸ್ಥಿತಿಯಲ್ಲಿ ನಾನೇ ಮುಂದೆ ಬಂದು ಸತ್ಯ ಹೇಳುವುದು ನನಗೆ ಇಷ್ಟವಿರಲಿಲ್ಲ. ಎಂಟು ವರ್ಷಗಳ ನಂತರವಾದರೂ ಸತ್ಯ ಹೊರಬಂದಿರುತ್ತದೆ ಎಂದು ನಿಜವಾಗಿಯೂ ಭಾವಿಸಿದ್ದೆ. ಆದರೆ, ಹಾಗಾಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡುವುದರಲ್ಲಿ ಆಸ್ಟ್ರೇಲಿಯಾಕ್ಕಿಂತ ಹೆಚ್ಚು ಪರಿಣತಿ ಹೊಂದಿತ್ತು. ಆ ತಂಡದ ಆಟಕ್ಕೆ ಸರಿಸಾಟಿಯಾಗಲು ಆಸ್ಟ್ರೇಲಿಯಾ ಪ್ರಯತ್ನಿಸುತ್ತಿತ್ತು ಎಂದೂ ಖ್ವಾಜಾ ತಿಳಿಸಿದ್ದಾರೆ. ತಮ್ಮ ಪುಸ್ತಕದಲ್ಲಿ ದಕ್ಷಿಣ ಆಫ್ರಿಕಾ ತಂಡ ಅನುಸರಿಸುತ್ತಿದ್ದ ವಿಧಾನಗಳ ಬಗ್ಗೆಯೂ ವಿವರಿಸುವುದಾಗಿ ಹೇಳಿದ್ದಾರೆ.
ಅಂದಿನ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ತಮ್ಮ ತಂಡ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಅಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿತ್ತು ಎಂದು ಈ ಹಿಂದೆ ಹಲವು ಬಾರಿ ಹೇಳಿದ್ದರು. ಚೆಂಡು ವಿರೂಪಗೊಳಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೂ ಎರಡು ಬಾರಿ ಶಿಕ್ಷೆ ವಿಧಿಸಲಾಗಿತ್ತು.






