ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತ; ಕ್ರಿಕೆಟಿಗ ಮೃತ್ಯು

sirajnoorani/X
ಶಹಜಹಾನ್ ಪುರ್ (ಉತ್ತರ ಪ್ರದೇಶ): ಕ್ರಿಕೆಟ್ ಪಂದ್ಯದ ವೇಳೆ 30 ವರ್ಷದ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಶನಿವಾರ ಉತ್ತರ ಪ್ರದೇಶದ ಶಹಜಹಾನ್ ಪುರ್ ಜಿಲ್ಲೆಯಲ್ಲಿ ನಡೆದಿದ್ದು, ಪಂದ್ಯದ ಮಧ್ಯದಲ್ಲೇ ಕ್ರಿಕೆಟಿಗರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಬ್ಯಾಟಿಂಗ್ ಮಾಡುವಾಗ, ಅಸೌಖ್ಯಕ್ಕೀಡಾಗಿದ್ದಂತೆ ಕಂಡು ಬಂದಿದ್ದರು ಎಂದು ಹೇಳಲಾಗಿದೆ.
ಸೋನಾಲ್ ಚಂದ್ರ ಮೃತಪಟ್ಟ ಕ್ರಿಕೆಟಿಗ. ಆಗಷ್ಟೇ ತಮ್ಮ ಬ್ಯಾಟಿಂಗ್ ಮುಗಿಸಿದ್ದ ಅವರು, ಮೈದಾನದಿಂದ ಪೆವಿಲಿಯನ್ ಗೆ ಹಿಂದಿರುಗುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಕುಸಿದು ಬಿದ್ದ ಸೋನಾಲ್ ಚಂದ್ರರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, 40 ನಿಮಿಷಗಳ ಚಿಕಿತ್ಸೆಯ ಬಳಿಕವೂ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದೆ. ಹೀಗಾಗಿ, ಆತನನ್ನು ಬರೇಲಿಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪಂದ್ಯದ ವೇಳೆ ಸೋನಾಲ್ ಚಂದ್ರ ಅವರೇ ಖುದ್ದಾಗಿ ಪಂದ್ಯದ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದರು. ಈ ವಿಡಿಯೊದಲ್ಲಿ ಅವರು ಅಸ್ವಸ್ಥಗೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮುನ್ನಿನ ದೃಶ್ಯಗಳು ಸೆರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ವ್ಯಾಮೋಹಿಯಾಗಿದ್ದ ಸೋನಾಲ್ ಚಂದ್ರ ಇದುವರೆಗೆ ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಅವರು ಅರ್ಹತೆ ಪಡೆದ ಅಂಪೈರ್ ಆಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.
26-year-old Sonal Chandra of #Shahjahanpur died of a #heartattack while he was having his batting shot recorded with a drone. It is reported that moments after capturing the shot, he suddenly felt chest pain and collapsed. His family immediately rushed him to the hospital,
— Siraj Noorani (@sirajnoorani) March 22, 2026
1/2 pic.twitter.com/fddkxDcVun






