ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ : ಕಂಬನಿ ಮಿಡಿದ ವಿರಾಟ್ ಕೊಹ್ಲಿ

Image Credit: INSTAGRAM/@ rinkukumar12
ಹೊಸದಿಲ್ಲಿ, ಫೆ.27: ಗ್ರೇಟರ್ ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಯುವ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ನಿಧನರಾಗಿದ್ದು, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಹಿತ ಹಲವರು ತಮ್ಮ ಸಂತಾಪ ವ್ಯಕ್ತಪಡಿಸಿದರು.
ಗ್ರೇಟರ್ ನೊಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ ಕೊನೆಯುಸಿರೆಳೆದರು. ಅವರು ಗ್ರೇಟರ್ ನೊಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಸ್ಪತ್ರೆಯ ಪಿಆರ್ಒ ಮಾಹಿತಿ ನೀಡಿದ್ದಾರೆ.
‘‘ರಿಂಕು ಸಿಂಗ್ ತಂದೆಯ ನಿಧನದ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ ಹೃದಯ ತುಂಬಿ ಪ್ರಾರ್ಥಿಸುವೆ. ಸಾಂತ್ವನಗಳಿಂದ ನಿಮಗೆ ಶಕ್ತಿ ಲಭಿಸಲಿ. ಓಂ ಶಾಂತಿ’’ ಎಂದು ಕೊಹ್ಲಿ ಎಕ್ಸ್ನಲ್ಲಿ ಬರೆದಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೂಡ ರಿಂಕು ಸಿಂಗ್ ತಂದೆಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೊದಲ ಸೂಪರ್-8 ಪಂದ್ಯ ನಡೆದ ನಂತರ ರಿಂಕು ಸಿಂಗ್ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ ರಿಂಕು ಅವರು ಟಿ-20 ವಿಶ್ವಕಪ್ ತಂಡವನ್ನು ತೊರೆದು ತಮ್ಮ ನಿವಾಸಕ್ಕೆ ಧಾವಿಸಿದ್ದರು. ಝಿಂಬಾಬ್ವೆ ವಿರುದ್ದ ಗುರುವಾರ ನಡೆದ ಸೂಪರ್-8 ಪಂದ್ಯಕ್ಕಾಗಿ ಚೆನ್ನೈಗೆ ಮರಳಿದ್ದ ರಿಂಕು ಭಾರತೀಯ ತಂಡವನ್ನು ಬುಧವಾರ ಸೇರಿಕೊಂಡಿದ್ದರು.
ರಿಂಕು ಸಿಂಗ್ ಝಿಂಬಾಬ್ವೆ ವಿರುದ್ಧದ ಸೂಪರ್-8 ಪಂದ್ಯದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ರಿಂಕು ಬದಲಿಗೆ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು.






