ಕ್ರಿಕೆಟಿಗರಾದ ಬಾಬರ್, ರಿಝ್ವಾನ್, ಶಹೀನ್ ಅಫ್ರಿದಿಯ ಇನ್ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಬ್ಲಾಕ್

PC : X
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪಾಕಿಸ್ತಾನಿ ಕ್ರಿಕೆಟಿಗರಾದ ಬಾಬರ್ ಅಝಮ್, ಮುಹಮ್ಮದ್ ರಿಝ್ವಾನ್ ಮತ್ತು ಶಹೀನ್ ಶಾ ಅಫ್ರಿದಿಯ ಇನ್ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ಮುಚ್ಚಲಾಗಿದೆ.
ಭಯೋತ್ಪಾದಕರು ನಡೆಸಿರುವ ಭೀಕರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಜಾವೆಲಿನ್ ಒಲಿಂಪಿಕ್ ಚಾಂಪಿಯನ್ ಅರ್ಶದ್ ನದೀಮ್ ಹಾಗೂ ಹಲವಾರು ಪಾಕಿಸ್ತಾನಿ ಕಲಾವಿದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಚ್ಚಿದ ದಿನಗಳ ಬಳಿಕ ಕ್ರಿಕೆಟಿಗರ ಖಾತೆಗಳನ್ನು ಮುಚ್ಚಲಾಗಿದೆ.
ಕ್ರಿಕೆಟಿಗರ ಇನ್ಸ್ಟಾಗ್ರಾಮ್ ಖಾತೆಗಳು “ಈ ಖಾತೆ ಭಾರತದಲ್ಲಿ ಲಭ್ಯವಿಲ್ಲ. ಖಾತೆಯನ್ನು ನಿರ್ಬಂಧಿಸುವಂತೆ ಕೋರುವ ಕಾನೂನು ಸೂಚನೆಯನ್ನು ನಾವು ಪಾಲಿಸಿದ್ದೇವೆ’’ ಎಂಬ ಅಧಿಕೃತ ಹೇಳಿಕೆಯನ್ನು ಒಳಗೊಂಡ ಖಾಲಿ ಪುಟಗಳನ್ನು ಪ್ರದರ್ಶಿಸುತ್ತಿವೆ.
ಆದಾಗ್ಯೂ, ಇತ್ತೀಚೆಗೆ ಭಾರತೀಯ ಸೇನೆಯನ್ನು ಟೀಕಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದಿ ಅಫ್ರಿದಿಯ 45 ಲಕ್ಷ ಅನುಯಾಯಿಗಳನ್ನು ಒಳಗೊಂಡ ಸಾಮಾಜಿಕ ಮಾಧ್ಯಮ ಖಾತೆ ಭಾರತದಲ್ಲಿ ಈಗಲೂ ಲಭ್ಯವಿದೆ.





