SPL 2024-25ರ ಅಂತಿಮ ಪಂದ್ಯದಲ್ಲಿ ಸೋಲು; ಅಲ್-ನಸರ್ ತಂಡದಿಂದ ನಿರ್ಗಮಿಸುವ ಸುಳಿವು ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ
'ಮುಗಿದ ಅಧ್ಯಾಯ' ಎಂದ ಪೋರ್ಚುಗೀಸ್ ಫುಟ್ಬಾಲ್ ತಾರೆ

ಕ್ರಿಸ್ಟಿಯಾನೊ ರೊನಾಲ್ಡೊ | PC : X
ಲಿಸ್ಬಾನ್: 2024-25ನೇ ಸಾಲಿನ ಸೌದಿ ಅರೇಬಿಯಾ ಪ್ರೀಮಿಯರ್ ಲೀಗ್ ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಅಲ್ ಫತೆ ತಂಡದೆದುರು ತಾವು ಪ್ರತಿನಿಧಿಸಿದ ಅಲ್-ನಸರ್ ತಂಡ ಪರಾಭವಗೊಂಡ ನಂತರ, ತಂಡದಿಂದ ನಿರ್ಗಮಿಸುವ ಸುಳಿವನ್ನು ಪೋರ್ಚುಗೀಸ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ನೀಡಿದ್ದಾರೆ.
ಫುಟ್ಬಾಲ್ ಅಭಿಮಾನಿಗಳ ಆರಾಧ್ಯ ದೈವವಾದ ಕ್ರಿಸ್ಟಿಯಾನೊ ರೊನಾಲ್ಡೊ, ಕ್ಲಬ್ ಮಟ್ಟದ ವೃತ್ತಿ ಜೀವನದಲ್ಲಿ ದಾಖಲೆಯ 800ನೇ ಗೋಲು ಗಳಿಸಿದರಾದರೂ, ತಾವು ಪ್ರತಿನಿಧಿಸಿದ ಅಲ್-ನಸರ್ ತಂಡವು 2-3 ಗೋಲುಗಳ ಅಂತರದಿಂದ ಪರಾಭವಗೊಳ್ಳುವುದನ್ನು ತಡೆಯಲು ಐದು ಬಾರಿಯ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರಾದ ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ, ಏಶ್ಯನ್ ಚಾಂಪಿಯನ್ಸ್ ಲೀಗ್ ನ ಎಲೈಟ್ ಹಂತಕ್ಕೆ ಅರ್ಹತೆ ಗಿಟ್ಟಿಸುವ ಅಲ್-ನಸರ್ ತಂಡದ ಕನಸು ಕಮರಿ ಹೋಯಿತು.
ಸೌದಿ ಅರೇಬಿಯಾ ಪ್ರೀಮಿಯರ್ ಲೀಗ್ ನಲ್ಲಿ 70 ಅಂಕಗಳೊಂದಿಗೆ ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಅಲ್-ನಸರ್ ತಂಡ, ಕ್ರೀಡಾಕೂಟದ ವಿಜೇತ ತಂಡವಾದ ಅಲ್-ಇತ್ತಿಹಾದ್ ಹಾಗೂ ರನ್ನರ್ ಅಪ್ ತಂಡವಾದ ಅಲ್-ಹಿಲಾಲ್ನಿಂದ ಕ್ರಮವಾಗಿ 13 ಹಾಗೂ 5 ಅಂಕಗಳಿಂದ ಹಿಂದುಳಿಯಿತು.





