ಮುಂದಿನ ಋತುವಿನಲ್ಲೂ ಅಲ್-ನಸ್ರ್ಗಾಗಿ ಆಡುವೆ: ಊಹಾಪೋಹಗಳಿಗೆ ತೆರೆ ಎಳೆದ ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ | PC : X
ರಿಯಾದ್: ಮುಂದಿನ ಋತುವಿನಲ್ಲಿ ಸೌದಿ ಅರೇಬಿಯದ ಅಲ್-ನಸ್ರ್ ಕ್ಲಬ್ಗಾಗಿ ಆಡುವುದನ್ನು ಮುಂದುವರಿಸುವುದಾಗಿ ಪೋರ್ಚುಗಲ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ. ಇದರೊಂದಿಗೆ ತನ್ನ ಭವಿಷ್ಯದ ಕುರಿತ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ರವಿವಾರ ಸ್ಪೇನ್ ದೇಶವನ್ನು ಸೋಲಿಸಿ ಪೋರ್ಚುಗಲ್ ಯುಇಎಫ್ಎ ನೇಶನ್ಸ್ ಲೀಗ್ ಪ್ರಶಸ್ತಿ ಗೆದ್ದಿದ್ದು, 40 ವರ್ಷದ ಆಟಗಾರ ತನ್ನ ಮೂರನೇ ಅಂತರ್ರಾಷ್ಟ್ರೀಯ ಪ್ರಶಸ್ತಿಯನ್ನು ಸಂಭ್ರಮಿಸಿದರು. ಫೈನಲ್ನ ದ್ವಿತೀಯಾರ್ಧದಲ್ಲಿ ರೊನಾಲ್ಡೊ ತನ್ನ 138ನೇ ಅಂತರ್ರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಅದರೊಂದಿಗೆ ನಿಗದಿತ ಅವಧಿಯಲ್ಲಿ ಪಂದ್ಯವು 2-2 ಡ್ರಾದೊಂದಿಗೆ ಮುಕ್ತಾಯಗೊಂಡಿತು. ಆಗ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಅವರ ಬದಲಿಗೆ ಬೇರೆ ಅಟಗಾರನನ್ನು ಇಳಿಸಲಾಯಿತಾದರೂ, ಪೋರ್ಚುಗಲ್ ಎಲ್ಲಾ ಐದು ಸ್ಪಾಟ್-ಕಿಕ್ಗಳನ್ನು ಗೋಲುಗಳಾಗಿ ಪರಿವರ್ತಿಸಿ ಟ್ರೋಫಿಯನ್ನು ಎತ್ತಿಕೊಂಡಿತು.
ವಿಜಯದ ಬಳಿಕ, ಸೌದಿ ಅರೇಬಿಯದ ಪ್ರೊ ಲೀಗ್ ಕ್ಲಬ್ ಅಲ್ ನಸ್ರ್ನಲ್ಲೇ ಉಳಿಯುವ ತನ್ನ ನಿರ್ಧಾರವನ್ನು ರೊನಾಲ್ಡೊ ಘೋಷಿಸಿದರು. ‘‘ನನ್ನ ಭವಿಷ್ಯವೇ? ಮೂಲತಃ ಯಾವ ಬದಲಾವಣೆಯೂ ಇಲ್ಲ’’ ಎಂದು ಅವರು ಹೇಳಿದರು. ನೀವು ಅಲ್-ನಸ್ರ್ನಲ್ಲೇ ಮುಂದುವರಿಯುತ್ತೀರಾ ಎಂಬ ನೇರ ಪ್ರಶ್ನೆಗೆ, ‘‘ಹೌದು’’ ಎಂದು ಉತ್ತರಿಸಿದರು.