ನಿವೃತ್ತಿಯ ಸುಳಿವು ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ | PC : X \ @Cristiano
ಮ್ಯೂನಿಚ್: ಪೋರ್ಚುಗಲ್ ಫುಟ್ಬಾಲ್ ತಂಡವು ಜರ್ಮನಿಯ ಮ್ಯೂನಿಚ್ನಲ್ಲಿ ರವಿವಾರ ಯುಇಎಫ್ಎ ನೇಶನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿಯ ಸುಳಿವು ನೀಡಿದರು.
ಮ್ಯೂನಿಚ್ನ ಅಲಿಯಾಂಝಾ ಅರೆನಾದಲ್ಲಿ ರವಿವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಸ್ಪೇನ್ ತಂಡವನ್ನು 5-3 ಅಂತರದಿಂದ ಮಣಿಸಿದ ನಂತರ 40ರ ಹರೆಯದ ಫುಟ್ಬಾಲ್ ದಂತಕತೆ ರೊನಾಲ್ಡೊ ಭಾವುಕರಾಗಿ ಕಣ್ಣೀರಿಟ್ಟರು.
ಫಾರ್ವರ್ಡ್ ಆಟಗಾರ ರೊನಾಲ್ಡೊ ಅವರು ನಿಗದಿತ ಸಮಯದಲ್ಲಿ ಗೋಲು ಗಳಿಸಿ ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡವು 2-2ರಿಂದ ಡ್ರಾಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಆ ನಂತರ ಗಾಯಗೊಂಡು ಮೈದಾನ ತೊರೆದಿದ್ದ ರೊನಾಲ್ಡೊ ಅವರು ಕಿಕ್ಕಿರಿದು ನೆರೆದಿದ್ದ ಸ್ಟೇಡಿಯಮ್ನಲ್ಲಿ ತನ್ನ ತಂಡವು 5-3 ಅಂತರದಿಂದ ಪೆನಾಲ್ಟಿ ಶೂಟೌಟ್ನಲ್ಲಿ ಗೆಲುವು ಸಾಧಿಸಿದ್ದನ್ನು ನೋಡಿ ಖುಷಿಪಟ್ಟರು.
2022ರಲ್ಲಿ ಖತರ್ನಲ್ಲಿ ಫಿಫಾ ವಿಶ್ವಕಪ್ ಕೊನೆಗೊಂಡ ನಂತರ ರೊನಾಲ್ಡೊ ಮತ್ತೊಂದು ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಾಪೋಹ ಹರಡಿದ್ದರು. ಮುಂದಿನ ವಿಶ್ವಕಪ್ ಟೂರ್ನಿಯ ವೇಳೆಗೆ ರೊನಾಲ್ಡೊ 41ನೇ ವರ್ಷಕ್ಕೆ ಕಾಲಿಡುತ್ತಾರೆ.
ಯುಇಎಫ್ಎ ನೇಶನ್ಸ್ ಲೀಗ್ ಪ್ರಶಸ್ತಿ ಗೆದ್ದ ನಂತರ ಪೋರ್ಚುಗಲ್ ಸ್ಟಾರ್ ಆಟಗಾರ ನಿವೃತ್ತಿಯ ಕುರಿತು ಪ್ರಮುಖ ಸುಳಿವು ನೀಡಿದ್ದು, ನಾನು ಗಂಭೀರವಾಗಿ ಗಾಯಗೊಳ್ಳದೆ ಇದ್ದರೆ ಕ್ರೀಡೆಯಲ್ಲಿ ಮುಂದುವರಿಯುವೆ ಎಂದಿದ್ದಾರೆ.
‘‘ನನ್ನ ವಯಸ್ಸು ಎಷ್ಟು ಅಂತ ನಿಮಗೆ ಗೊತ್ತಾ? ಈಗ ನಾನು ಯುವಕನಲ್ಲ, ನಿವೃತ್ತಿಗೆ ಹತ್ತಿರ ಬಂದಿದ್ದೇನೆ. ಆದರೆ ಪ್ರತಿ ಕ್ಷಣವನ್ನೂ ಆನಂದಿಸಬೇಕು. ಗಂಭೀರವಾಗಿ ಗಾಯಗೊಳ್ಳದಿದ್ದರೆ ನಾನು ಮುಂದುವರಿಸುತ್ತೇನೆ’’ ಎಂದು ಯುಇಎಫ್ ನೇಶನ್ಸ್ ಲೀಗ್ ಗೆಲುವಿನ ನಂತರ ರೊನಾಲ್ಡೊ ಸುದ್ದಿಗಾರರಿಗೆ ತಿಳಿಸಿದರು.
ರೊನಾಲ್ಡೊ ಅವರು 61ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು ಸಮಬಲಗೊಳಿಸಿದರು. 88ನೇ ನಿಮಿಷದಲ್ಲಿ ಮತ್ತೊಮ್ಮೆ ಮೈದಾನಕ್ಕಿಳಿದ ರೊನಾಲ್ಡೊಗೆ ನೆರೆದಿದ್ದ ಅಭಿಮಾನಿಗಳು ಎದ್ದುನಿಂತು ಗೌರವಿಸಿದರು. ಕೋಚ್ ರೊಬರ್ಟೊ ಮಾರ್ಟಿನೆಝ್ ಆಲಿಂಗಿಸಿದರು.
ಸ್ಪೇನ್ ವಿರುದ್ಧದ ಫೈನಲ್ ಪಂದ್ಯಕ್ಕಿಂತ ಮೊದಲೇ ಗಾಯದಿಂದ ಬಳಲುತ್ತಿದ್ದೆ ಎಂದು ಬಹಿರಂಗಪಡಿಸಿದ ರೊನಾಲ್ಡೊ, ‘‘ನಾನು ಸ್ವಲ್ಪ ಸಮಯದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದೆ. ಅಭ್ಯಾಸದ ವೇಳೆ ಮತ್ತೆ ಗಾಯವಾಗಿದೆ. ಆದರೆ ರಾಷ್ಟ್ರೀಯ ತಂಡಕ್ಕಾಗಿ ಕಾಲು ಮುರಿದುಕೊಳ್ಳಲು ತಯಾರಿದ್ದೇನೆ. ಟ್ರೋಫಿಗಾಗಿ ನಾನು ಆಡಬೇಕಾಗಿತ್ತು. ನಾನು ತಂಡಕ್ಕಾಗಿ ಆಡಿ ಎಲ್ಲ ಪ್ರಯತ್ನವನ್ನು ಮಾಡಿದ್ದೇನೆ’’ ಎಂದರು.