ಭಾರತಕ್ಕೆ ಬರುತ್ತಿಲ್ಲ ಕ್ರಿಸ್ಟಿಯಾನೊ ರೊನಾಲ್ಡೊ!

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : NDTV
ಮಾರ್ಗಾವೊ: ಸೌದಿ ಅರೇಬಿಯಾದ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಅಲ್ ನಸ್ರ್ ತಂಡವು ಎಎಫ್ಸಿ ಚಾಂಪಿಯನ್ಸ್ ಲೀಗ್ 2ರ ಗುಂಪು ಹಂತದ ಪಂದ್ಯಕ್ಕಾಗಿ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಲು ಸಜ್ಜಾಗಿದೆ. ಆದರೆ ತಂಡದ ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಕ್ಟೋಬರ್ 22ರಂದು ಗೋವಾದಲ್ಲಿ ನಡೆಯಲಿರುವ ಎಫ್ಸಿ ಗೋವಾ ವಿರುದ್ಧದ ಪಂದ್ಯಕ್ಕೆ ತಂಡದೊಂದಿಗೆ ಬರುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಸೌದಿ ಕ್ರೀಡಾ ಪತ್ರಿಕೆ ಅಲ್ ರಿಯಾಧಿಯಾ ವರದಿ ಪ್ರಕಾರ, ರೊನಾಲ್ಡೊ ಆಗಮಿಸುವಂತೆ ಎಫ್ಸಿ ಗೋವಾ ಆಡಳಿತ ಮಂಡಳಿಯಿಂದ ಹಲವಾರು ವಿನಂತಿಗಳಿದ್ದರೂ, 40 ವರ್ಷದ ರೊನಾಲ್ಡೊ ಈ ಪ್ರವಾಸಕ್ಕೆ ಆಗಮಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಅಲ್ ನಸ್ರ್ ಇತ್ತೀಚೆಗೆ ಅಲ್ ಫತೇಹ್ ವಿರುದ್ಧದ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಕಾಂಟಿನೆಂಟಲ್ ಕ್ಲಬ್ ಟೂರ್ನಿಯ ಮೂರನೇ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಪಂದ್ಯ ಮಾರ್ಗಾವೊ ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಎಫ್ಸಿ ಗೋವಾ ಈ ಸೀಸನ್ ನಲ್ಲಿ ಎಎಫ್ಸಿ ಚಾಂಪಿಯನ್ ಅಲ್ ಸೀಬ್ ತಂಡದ ವಿರುದ್ಧ ಜಯಗಳಿಸಿ ಎಎಫ್ಸಿ ಚಾಂಪಿಯನ್ಸ್ ಲೀಗ್ 2ಕ್ಕೆ ಅರ್ಹತೆ ಪಡೆದಿದೆ. ನಂತರ ನಡೆದ ಡ್ರಾ ಪ್ರಕ್ರಿಯೆಯಲ್ಲಿ ಅಲ್ ನಸ್ರ್ ಜೊತೆಗೆ ಒಂದೇ ಗುಂಪಿಗೆ ಸೇರಿದ್ದರಿಂದ, ರೊನಾಲ್ಡೊ ಭಾರತಕ್ಕೆ ಬರುವ ನಿರೀಕ್ಷೆಯಿಂದ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಆದರೆ ಅಲ್ ನಸ್ರ್ ಜೊತೆಗಿನ ತಮ್ಮ ಒಪ್ಪಂದದಲ್ಲಿ ಸೌದಿ ಅರೇಬಿಯಾದ ಹೊರಗಿನ ಪಂದ್ಯಗಳಲ್ಲಿ ಪಾಲ್ಗೊಳ್ಳುವುದನ್ನು ಆಯ್ಕೆಮಾಡುವ ಹಕ್ಕು ರೊನಾಲ್ಡೊ ಅವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ ನಸ್ರ್ ತಂಡವು ಗೋವಾದ ದಾಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಆಗಮಿಸಲಿದ್ದು, ರೊನಾಲ್ಡೊ ಮಾತ್ರ ಈ ಪ್ರಯಾಣದಿಂದ ಹಿಂದೆ ಸರಿದಿದ್ದಾರೆ. ಮುಂದಿನ ವರ್ಷದ ವಿಶ್ವಕಪ್ ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ರೊನಾಲ್ಡೊ, ತಮ್ಮ ದೈಹಿಕ ಸಾಮರ್ಥ್ಯ ಮತ್ತು ಕಾರ್ಯಭಾರವನ್ನು ಸಮತೋಲನಗೊಳಿಸಲು ಗಮನಹರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ರೊನಾಲ್ಡೊ ತಂಡದ ಜೊತೆ ಇಲ್ಲದಿದ್ದರೂ ಅಲ್ ನಸ್ರ್ ಈಗಾಗಲೇ ಎಎಫ್ಸಿ ಚಾಂಪಿಯನ್ಸ್ ಲೀಗ್ 2 ರ ಎರಡು ಗುಂಪು ಹಂತದ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಮುಂದಿನ ಸುತ್ತಿಗೆ ಮುನ್ನಡೆಯಲು ಬಲಿಷ್ಠ ಸ್ಥಿತಿಯಲ್ಲಿಯೇ ಇದೆ.
ಎಫ್ಸಿ ಗೋವಾ ವಿರುದ್ಧದ ಪಂದ್ಯದ ನಂತರ ಅಲ್ ನಸ್ರ್ ಅ. 28ರಂದು ಕಿಂಗ್ಸ್ ಕಪ್ ಟೂರ್ನಿಯ 16ರ ಸುತ್ತಿನಲ್ಲಿ ಅಲ್ ಇತ್ತಿಹಾದ್ ವಿರುದ್ಧ ಪೈಪೋಟಿ ನಡೆಸಲಿದೆ.







