ಶೀಘ್ರದಲ್ಲೇ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ?

ಕ್ರಿಸ್ಟಿಯಾನೊ ರೊನಾಲ್ಡೊ | PC : X
ಪ್ಯಾರಿಸ್, ನ.5: ಪೋರ್ಚುಗಲ್ ಹಾಗೂ ಅಲ್ ನಸ್ರ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ‘ಶೀಘ್ರದಲ್ಲೇ’ ನಿವೃತ್ತಿಯಾಗುವ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಪಿಯರ್ಸ್ ಮೊರ್ಗನ್ ಅನ್ಸೆನ್ಸಾರ್ಡ್ಗೆ ನೀಡಿದ ಸಂದರ್ಶನವೊಂದರಲ್ಲಿ ರೊನಾಲ್ಡೊ ಅವರು, ನಿವೃತ್ತಿ ಹಾಗೂ ಫುಟ್ಬಾಲ್ ನಂತರದ ಜೀವನದ ಕುರಿತು ತಮ್ಮ ಆಲೋಚನೆಗಳನ್ನು ಚರ್ಚಿಸಿದರು.
952 ಗೋಲುಗಳನ್ನು ಗಳಿಸಿರುವ 40ರ ವಯಸ್ಸಿನ ರೊನಾಲ್ಡೊ ಅವರು ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.
2027ರ ತನಕ ಅಲ್ ನಸ್ರ್ ಫುಟ್ಬಾಲ್ ಕ್ಲಬ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ರೊನಾಲ್ಡೊ ಅವರಲ್ಲಿ ನಿವೃತ್ತಿಯಾಗುವ ಯೋಚನೆ ಇದೆಯೇ ಎಂದು ಪ್ರಶ್ನಿಸಿದಾಗ, ‘‘ಶೀಘ್ರದಲ್ಲೇ ಆ ನಿಟ್ಟಿನಲ್ಲಿ ಯೋಚಿಸುವೆ. ನಿವೃತ್ತಿಗೆ ನಾನು ಸಿದ್ಧನಾಗಿರುತ್ತೇನೆ ಎಂದು ಭಾವಿಸುವೆ’’ ಎಂದರು.
‘‘ಖಂಡಿತವಾಗಿಯೂ ನಿವೃತ್ತಿಯ ನಿರ್ಧಾರ ಕಠಿಣವಾಗಿರುತ್ತದೆ. ಅದು ಕಷ್ಟಕವಾಗಿರುತ್ತದೆ. ಆಗ ನಾನು ಅಳಬಹುದು. ನಾನು 25,26, 27 ವರ್ಷ ವಯಸ್ಸಿನಿಂದಲೆ ನನ್ನ ಭವಿಷ್ಯವನ್ನು ಸಿದ್ಧಪಡಿಸಿಕೊಂಡೆ. ಆದ್ದರಿಂದ ನಾನು ಆ ಒತ್ತಡವನ್ನು ನಿಭಾಯಿಸಲು ಸಮರ್ಥನಾಗುತ್ತೇನೆಂದು ಭಾವಿಸುವೆ’’ ಎಂದು ರೊನಾಲ್ಡೊ ಹೇಳಿದರು.
ಸ್ಪೋರ್ಟಿಂಗ್ ಲಿಸ್ಬನ್ನೊಂದಿಗೆ ತನ್ನ ವೃತ್ತಿಜೀವನ ಆರಂಭಿಸಿದ ನಂತರ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಹಾಗೂ ಜುವೆಂಟಸ್ ತಂಡಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದರು. ಮ್ಯಾಂಚೆಸ್ಟರ್ನಲ್ಲಿ ತಮ್ಮ ಮೊದಲ ಅವಧಿಯಲ್ಲಿ 3 ಪ್ರೀಮಿಯರ್ ಲೀಗ್ ಪ್ರಶಸ್ತಿಗಳು ಹಾಗೂ ಚಾಂಪಿಯನ್ಸ್ ಲೀಗ್ ಸಹಿತ ಇತರ ಟ್ರೋಫಿಗಳನ್ನು ಗೆದ್ದಿದ್ದರು.
ಮ್ಯಾಡ್ರಿಡ್ನೊಂದಿಗೆ 2 ಲಾಲಿಗಾ ಪ್ರಶಸ್ತಿಗಳು ಹಾಗೂ ನಾಲ್ಕು ಚಾಂಪಿಯನ್ಸ್ ಲೀಗ್ ಕಿರೀಟಗಳನ್ನು ಜಯಿಸಿದ್ದರು.
2022ರಲ್ಲಿ ಯುನೈಟೆಡ್ ತಂಡವನ್ನು ತೊರೆದ ನಂತರ ರೊನಾಲ್ಡೊ ಅವರು ಸೌದಿ ಪ್ರೊ ಲೀಗ್ ತಂಡ ಅಲ್ ನಸ್ರ್ ತಂಡವನ್ನು ಸೇರಿದ್ದರು.
ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ‘ ಒರ್ ಪ್ರಶಸ್ತಿಗೆ ಭಾಜನರಾಗಿರುವ ರೊನಾಲ್ಡೊ ಈ ತನಕ ಫಿಫಾ ವಿಶ್ವಕಪ್ ಗೆದ್ದಿಲ್ಲ.







