ಸೌದಿ ಪ್ರೊ ಲೀಗ್ ನಲ್ಲಿ 100ನೇ ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ |Photo Credit : @Cristiano
ದೋಹಾ, ಮೇ 8: ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಗುರುವಾರ ಸೌದಿ ಪ್ರೊ ಲೀಗ್ ನಲ್ಲಿ ತನ್ನ 100ನೇ ಗೋಲು ಗಳಿಸಿ ಮಹತ್ವದ ಮೈಲಿಗಲ್ಲು ತಲುಪಿದರು. ಅಲ್ ನಸ್ರ್ ತಂಡವು ಅಲ್-ಶಾಬಾಬ್ ತಂಡವನ್ನು 4-2 ಅಂತರದಿಂದ ಮಣಿಸಿದ ಪಂದ್ಯದಲ್ಲಿ ರೊನಾಲ್ಡೊ ಈ ಸಾಧನೆ ಮಾಡಿದರು.
ಅಲ್ ನಸ್ರ್ ತಂಡವು ಐದು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
41ರ ಹರೆಯದ ಫಾರ್ವರ್ಡ್ ಆಟಗಾರ ರೊನಾಲ್ಡೊ ಅವರು ಸಾದಿಯೊ ಮಾನ್ ನೀಡಿದ್ದ ಕ್ರಾಸ್ ನೆರವಿನಿಂದ 75ನೇ ನಿಮಿಷದಲ್ಲಿ ಗೋಲು ಗಳಿಸಿದರು. ತನ್ನ ವೃತ್ತಿಜೀವನದಲ್ಲಿ 971ನೇ ಗೋಲು ಗಳಿಸಿ ದಾಖಲೆ ನಿರ್ಮಿಸಿದರು. ಈ ಋತುವಿನ ಲೀಗ್ ನಲ್ಲಿ ರೊನಾಲ್ಡೊ ಗಳಿಸಿರುವ 26ನೇ ಗೋಲು ಇದಾಗಿದೆ. ರೊನಾಲ್ಡೊ ಅವರು ಎಲ್ಲ ಸ್ಪರ್ಧಾವಳಿಗಳಲ್ಲಿ ಅಲ್-ನಸ್ರ್ ಪರ ಒಟ್ಟು 127 ಗೋಲುಗಳನ್ನು ಗಳಿಸಿದ್ದಾರೆ.
ಜುಲೈನಲ್ಲಿ ಚೆಲ್ಸಿಯಾ ತಂಡದಿಂದ ಸಹಿ ಹಾಕಿರುವ ಜೊವೊ ಫೆಲಿಕ್ಸ್ ಅವರು ಅಲ್ ನಸ್ರ್ ಪರ ಮೂರು ಗೋಲುಗಳನ್ನು ಗಳಿಸಿದರು. ಲೀಗ್ ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಅಲ್ ನಸ್ರ್ ತಂಡಕ್ಕೆ ಮಹತ್ವದ ಗೆಲುವು ತಂದುಕೊಟ್ಟರು.
ರೊನಾಲ್ಡೊ ಈ ಸಾಧನೆಯ ಮೂಲಕ ಗೋಲು ಗಳಿಸುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದರು. ಇದೀಗ ಅವರು ಫುಟ್ಬಾಲ್ ಇತಿಹಾಸದಲ್ಲಿ ಮೂರು ವಿಭಿನ್ನ ದೇಶೀಯ ಸ್ಪರ್ಧಾವಳಿಗಳಲ್ಲಿ 100 ಲೀಗ್ ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಸೌದಿ ಅರೇಬಿಯದಲ್ಲಿ ಈ ಮೈಲಿಗಲ್ಲು ತಲುಪುವ ಮೊದಲು ರೊನಾಲ್ಡೊ ಅವರು ಲಾಲಿಗ ಹಾಗೂ ರಿಯಲ್ ಮ್ಯಾಡ್ರಿಡ್, ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ಗೋಲು ಗಳಿಕೆಯಲ್ಲಿ ಶತಕ ಗಳಿಸಿದ್ದಾರೆ.
ಈ ಗೆಲುವಿನ ಮೂಲಕ ಅಲ್-ನಸ್ರ್ ತಂಡವು 32 ಪಂದ್ಯಗಳಲ್ಲಿ 82 ಅಂಕಗಳನ್ನು ಗಳಿಸಿದ್ದು, ಅಲ್-ಹಿಲಾಲ್ ತಂಡಕ್ಕಿಂತ ಐದು ಗೋಲುಗಳಿಂದ ಮುಂದಿದೆ.
ಐದು ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಗೆದ್ದಿರುವ ರೊನಾಲ್ಡೊ 2022ರ ಡಿಸೆಂಬರ್ ನಲ್ಲಿ ಅಲ್-ನಸ್ರ್ ಫುಟ್ಬಾಲ್ ಕ್ಲಬ್ನೊಂದಿಗೆ ಸಹಿ ಹಾಕಿದ ನಂತರ ಸೌದಿ ಅರೇಬಿಯದಲ್ಲಿ ಪ್ರಮುಖ ಟ್ರೋಫಿಯನ್ನು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ.






