ಕ್ರೊಯೇಶಿಯದ ಟೆನಿಸ್ ಆಟಗಾರ ಐವೊ ಕಾರ್ಲೋವಿಕ್ ನಿವೃತ್ತಿ

ಐವೊ ಕಾರ್ಲೋವಿಕ್ | Photo: NDTV
ಹೊಸದಿಲ್ಲಿ: ಕ್ರೊಯೇಶಿಯದ ನೀಳಕಾಯದ ಟೆನಿಸ್ ಆಟಗಾರ ಐವೊ ಕಾರ್ಲೋವಿಕ್ 44ನೇ ವಯಸ್ಸಿನಲ್ಲಿ ಟೆನಿಸ್ ಕ್ರೀಡೆಯಿಂದ ಅಧಿಕೃತವಾಗಿ ನಿವೃತ್ತಿ ಪ್ರಕಟಿಸಿದರು.
ಕಾರ್ಲೋವಿಕ್ ತನ್ನ ವೃತ್ತಿಜೀವನದಲ್ಲಿ ಶಕ್ತಿಶಾಲಿ ಸರ್ವ್ಗಳ ಮೂಲಕ ಪ್ರಸಿದ್ಧರಾಗಿದ್ದರು. ತನ್ನ ಎದುರಾಳಿಗಳ ವಿರುದ್ಧ 13,000ಕ್ಕೂ ಅಧಿಕ ಅಧಿಕೃತ ಸರ್ವ್ಗಳನ್ನು ಗಳಿಸಿದ್ದಾರೆ.
ಕಾರ್ಲೋವಿಕ್ ಅವರ ವಿಶಿಷ್ಟ ಶೈಲಿ ಹಾಗೂ ಬಲವಾದ ಸರ್ವ್ಗಳು ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸಹಿತ ಟೆನಿಸ್ನ ಕೆಲವು ಪ್ರಮುಖ ಆಟಗಾರರಿಗೆ ಸವಾಲುಗಳನ್ನು ಒಡ್ಡಿದ್ದವು. ಜೊಕೊವಿಕ್ರನ್ನು 3 ಬಾರಿ ಮುಖಾಮುಖಿಯಾಗಿದ್ದಾಗ ಎರಡು ಬಾರಿ ಜಯ ಸಾಧಿಸಿದ್ದರು.
2021ರಲ್ಲಿ ಇಂಡಿಯನ್ ವೆಲ್ಸ್ನಲ್ಲಿ ಕೊನೆಯ ಬಾರಿ ಟೆನಿಸ್ ಅಂಗಣದಲ್ಲಿ ಕಾಣಿಸಿಕೊಂಡಿದ್ದ ಕಾರ್ಲೋವಿಕ್ ತನ್ನ 45ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ ಸಾಮಾಜಿಕ ಮಾಧ್ಯಮದ ಮೂಲಕ ತನ್ನ ನಿವೃತ್ತಿಯನ್ನು ಖಚಿತಪಡಿಸಿದರು.
ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಕಾರ್ಲೋವಿಕ್ ಅವರು ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಹಾಗೂ ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ.
2000ರಲ್ಲಿ ವೃತ್ತಿಪರ ಟೆನಿಸ್ ಗೆ ಕಾಲಿಟ್ಟಿದ್ದ ಕಾರ್ಲೋವಿಕ್ ಮೂರು ವರ್ಷಗಳ ನಂತರ ವಿಂಬಲ್ಡನ್ನಲ್ಲಿ ಸ್ಮರಣೀಯ ಚೊಚ್ಚಲ ಪಂದ್ಯ ಆಡಿದ್ದರು. ಆಗ ಅವರು ಹಾಲಿ ಚಾಂಪಿಯನ್ ಲಿಟನ್ ಹೆವಿಟ್ರನ್ನು ಸೋಲಿಸಿದ್ದರು. 2009ರಲ್ಲಿ ವಿಂಬಲ್ಡನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವುದು ಗ್ರ್ಯಾನ್ಸ್ಲಾಮ್ನಲ್ಲಿ ಕಾರ್ಲೋವಿಕ್ ಅವರ ಶ್ರೇಷ್ಠ ಸಾಧನೆಯಾಗಿದೆ.
2008ರಲ್ಲಿ ಮಾಜಿ ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ರನ್ನು ಸೋಲಿಸಿ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ ನಂತರ ಎಟಿಪಿ ರ್ಯಾಂಕಿಂಗ್ ನಲ್ಲಿ 14ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.
ಕಾರ್ಲೋವಿಕ್ ತನ್ನ ವೃತ್ತಿಬದುಕಿನಲ್ಲಿ 8 ಪ್ರಶಸ್ತಿಗಳನ್ನು ಜಯಿಸಿದ್ದು, 2016ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದ್ದಿದ್ದರು.







