ಸಿಎಸ್ಕೆ ಸೋಲಿನ ಬಳಿಕ ಪ್ಲೇಆಫ್ ಚಿತ್ರಣ: ಒಂದು ಸ್ಥಾನಕ್ಕೆ ನಾಲ್ಕು ತಂಡ ಪೈಪೋಟಿ

Photo: x.com/CricketNDTV
ಹೊಸದಿಲ್ಲಿ: ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಜಿಟಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದ್ದು, ಸಿಎಸ್ಕೆ ತಂಡ ಈ ವರ್ಷದ ಅಭಿಯಾನ ಮುಗಿಸಿದೆ. 14 ಪಂದ್ಯಗಳಿಂದ 12 ಅಂಕ ಕಲೆ ಹಾಕಿರುವ ಸಿಎಸ್ಕೆ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. 13 ಪಂದ್ಯಗಳಿಂದ 18 ಅಂಕ ಪಡೆದಿರುವ ಆರ್ಸಿಬಿ, 14 ಪಂದ್ಯಗಳಿಂದ 18 ಅಂಕ ಹೊಂದಿರುವ ಜಿಟಿ ಹಾಗೂ 13 ಪಂದ್ಯಗಳಿಂದ 16 ಅಂಕ ಪಡೆದಿರುವ ಎಸ್ಆರ್ಎಚ್ ಈಗಾಗಲೇ ಪ್ಲೇಆಫ್ ಹಂತಕ್ಕೆ ಮುನ್ನಡೆದಿವೆ. ನಾಲ್ಕನೇ ಸ್ಥಾನಕ್ಕೆ ರಾಜಸ್ಥಾನ (14), ಪಂಜಾಬ್ ಕಿಂಗ್ಸ್ (13), ಕೊಲ್ಕತ್ತಾ ನೈಟ್ ರೈಡರ್ಸ್ (13) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (12) ರೇಸ್ನಲ್ಲಿ ಇದ್ದು, ಮುಂದಿನ ಹಂತಕ್ಕೇರಲು ಎಲ್ಲ ತಂಡಗಳೂ ತಮ್ಮ ಕೊನೆಯ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿವೆ.
ಆದರೆ ರವಿವಾರ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಸೋತರೂ ಆರ್ಆರ್ ತಂಡಕ್ಕೆ ಪ್ಲೇಆಫ್ ಹಂತಕ್ಕೇರುವ ಕ್ಷೀಣ ಅವಕಾಶ ಉಳಿಯುತ್ತದೆ. ಆದರೆ ಆಗ ಆರ್ಆರ್ ಭವಿಷ್ಯ ಹೆಚ್ಚಿನ ರನ್ ರೇಟ್ ಕಾಯ್ದುಕೊಳ್ಳುವ ಜತೆಗೆ ಇತರ ತಂಡಗಳು ಸೋಲುವುದನ್ನು ಅವಲಂಬಿಸಿರುತ್ತದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡಿಸಿ ಹಾಗೂ ಕೆಕೆಆರ್ ಸೆಣೆಸಲಿವೆ. ಕೊನೆಯ ಪಂದ್ಯವನ್ನು ಸೋತರೂ ಆರ್ಆರ್ ಪ್ಲೇಆಫ್ಗೆ ಅರ್ಹತೆ ಪಡೆಯಬೇಕಿದ್ದರೆ 12 ಅಂಕಗಳನ್ನು ಹೊಂದಿರುವ ಡಿಸಿ ತಂಡ 13 ಅಂಕ ಹೊಂದಿರುವ ಕೆಕೆಆರ್ ತಂಡವನ್ನು ಅಲ್ಪ ಅಂತರದಿಂದ ಸೋಲಿಸಬೇಕು!
ಗುರುವಾರ ಜಿಟಿ ವಿರುದ್ಧದ ಸೋಲಿನೊಂದಿಗೆ ಐದು ಬಾರಿಯ ಚಾಂಪಿಯನ್ ಸಿಎಸ್ಕೆ ತಂಡ, ಸತತ ಮೂರನೇ ಸೀಸನ್ನಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದೆ.






