CSKಗೆ ಹಿನ್ನಡೆ; IPL ಟೂರ್ನಿಯಿಂದಲೇ ಹೊರಬಿದ್ದ ಪ್ರಮುಖ ವೇಗಿ ಖಲೀಲ್ ಅಹ್ಮದ್

ಖಲೀಲ್ ಅಹ್ಮದ್ (Photo: X/@ChennaiIPL)
ಹೊಸದಿಲ್ಲಿ: ಎಪ್ರಿಲ್ 14ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಖಲೀಲ್ ಅಹ್ಮದ್ ಐಪಿಎಲ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಇದರಿಂದ, ಈ ಋತುವಿನಲ್ಲಿ ಆರಂಭಿಕ ಮೇಲುಗೈ ಸಾಧಿಸಲು ಎಡಗೈ ವೇಗಿ ಖಲೀಲ್ ಅಹ್ಮದ್ ರನ್ನು ಅವಲಂಬಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.
ಚೆಪಾಕ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಹತ್ವದ ಘಟ್ಟದಲ್ಲಿ ಖಲೀಲ್ ಅಹ್ಮದ್ ಗಾಯಗೊಂಡಿದ್ದರು. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಿಬಿರದಲ್ಲಿ ಆತಂಕವನ್ನುಂಟು ಮಾಡಿತ್ತು. ಖಲೀಲ್ ಅಹ್ಮದ್ ಗಂಭೀರ ಸ್ವರೂಪದ ಸ್ನಾಯುಸೆಳೆತಕ್ಕೆ ಗುರಿಯಾಗಿದ್ದು, ಅವರಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮೂಲಗಳು ತಿಳಿಸಿವೆ.
ಅವರು ಚೇತರಿಸಿಕೊಳ್ಳಲು 10ರಿಂದ 12 ವಾರಗಳ ಕಾಲ ಹಿಡಿಯಲಿದೆ ಎಂದು ಹೇಳಲಾಗಿದ್ದು, ಹೀಗಾಗಿ ಅವರನ್ನು ಐಪಿಎಲ್ 2026 ಋತುವಿನಿಂದ ಕೈಬಿಡಲಾಗಿದೆ.
ತಂಡದ ಪ್ರಮುಖ ವೇಗಿಯಾಗಿದ್ದ ಖಲೀಲ್ ಅಹ್ಮದ್, ಈ ಬಾರಿಯ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಎಲ್ಲ ಐದು ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದರು.




