ಜರ್ಮನಿ ವಿರುದ್ಧ 1-7 ಗೋಲುಗಳ ಸೋಲಿನ ನಡುವೆಯೂ ಇತಿಹಾಸ ಸೃಷ್ಟಿಸಿದ ಕ್ಯುರೆ ಸಾವೋ

Photo: x.com/CGTNOfficial
ಹೌಸ್ಟನ್: ಮೊದಲ ಬಾರಿಗೆ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದ ಕ್ಯುರೆ ಸಾವೋ ತಂಡವನ್ನು 7-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಜರ್ಮನಿ ತಂಡ 2026 ಫಿಫಾ ವಿಶ್ವಕಪ್ ಅಭಿಯಾನ ಆರಂಭಿಸಿತು. ಆರನೇ ನಿಮಿಷದಲ್ಲೇ ಫೆಲಿಕ್ಸ್ ಮೆಚಾ ಅವರ ಗೋಲಿನೊಂದಿಗೆ ಜರ್ಮನಿ ಮುನ್ನಡೆ ಪಡೆಯಿತು.
ಚೊಚ್ಚಲ ಪಂದ್ಯದ 21ನೇ ನಿಮಿಷದಲ್ಲೇ ಗೋಲು ಗಳಿಸುವ ಮೂಲಕ ಕ್ಯುರೆ ಸಾವೋ ಸ್ಕೋರ್ ಸರಿಗಟ್ಟಿತು ಹಾಗೂ ಮೊದಲ ಪಂದ್ಯದಲ್ಲಿ ಗೋಲು ಗಳಿಸಿ ಇತಿಹಾಸ ಸೃಷ್ಟಿಸಿತು. ಲಿನಾವೊ ಕೊಮೆನೆನ್ಸಿಯಾ 21ನೇ ನಿಮಿಷದಲ್ಲಿ ಎಡಗಾಲಲ್ಲಿ ಹೊಡೆದ ಚೆಂಡು ಗೋಲುಪೆಟ್ಟಿಗೆ ಸೇರಿತು.
ಈ ಗೋಲು 2014ರ ವಿಶ್ವಚಾಂಪಿಯನ್ನರಿಗೆ ಎಚ್ಚರಿಕೆಯ ಕರೆಗಂಟೆಯಾಯಿತು ಹಾಗೂ ನಿಕೊ ಶ್ಲೊಟರ್ಬೆಕ್ ಅವರ ಗೋಲು ಜರ್ಮನಿಗೆ ಮತ್ತೆ ಮುನ್ನಡೆ ತಂದುಕೊಟ್ಟಿತು. ವಿರಾಮಕ್ಕೆ ಐದು ನಿಮಿಷ ಮುನ್ನ ಕೈ ಹಾವರ್ಟ್ಸ್ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಮುನ್ನಡೆಯನ್ನು 3-1ಕ್ಕೆ ಏರಿಸಿದರು.
ವಿರಾಮದ ತಕ್ಷಣ 47ನೇ ನಿಮಿಷದಲ್ಲಿ ಜಮಾಲ್ ಮುಸಿಯಾಲಾ ಹಾಗೂ 68ನೇ ನಿಮಿಷದಲ್ಲಿ ನಥಾನಿಯೆಲ್ ಬ್ರೌನ್ ಹೊಡೆದ ಗೋಲಿನಿಂದ ಮುನ್ನಡೆ 5-1ಕ್ಕೆ ಹೆಚ್ಚಿತು. ವಿಶ್ವಕಪ್ಗೆ ಪದಾರ್ಪಣೆ ಮಾಡಿದ ಬದಲಿ ಆಟಗಾರ ಡೆನಿಸ್ ಉಂಡಾವ್ 78ನೇ ನಿಮಿಷದಲ್ಲಿ ಮತ್ತು ಹಾವರ್ಟ್ಸ್ 88ನೇ ನಿಮಿಷದಲ್ಲಿ ಮತ್ತೆರಡು ಗೋಲು ಬಾರಿಸಿ 7-1 ಅಂತರದಿಂದ ಜರ್ಮನಿ ತಂಡ ಪಂದ್ಯ ಗೆಲ್ಲಲು ಕಾರಣರಾದರು. ಈ ಗೆಲುವಿನ ಹೊರತಾಗಿಯೂ ಜರ್ಮನಿ ತಂಡಕ್ಕೆ 1982ರಲ್ಲಿ ಹಂಗರಿ ತಂಡ ಎಲ್ ಸಾಲ್ವಡೋರ್ ವಿರುದ್ಧ ಸಾಧಿಸಿದ 10-1 ಗೋಲಿನ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.






