ಫಿಫಾ ವಿಶ್ವಕಪ್ ಗೆ ಅರ್ಹತೆ ಪಡೆದ ಪುಟ್ಟ ರಾಷ್ಟ್ರ ಕ್ಯೂರಸೌ

Photo Credit: Reuters
ಕಿಂಗ್ಸ್ಟನ್(ಜಮೈಕಾ), ನ.19: ಕಿಂಗ್ಸ್ಟನ್ನಲ್ಲಿ ಜಮೈಕಾ ತಂಡದ ವಿರುದ್ಧ ಮಂಗಳವಾರ ಗೋಲುರಹಿತ ಡ್ರಾ ಸಾಧಿಸಿರುವ ವೆಸ್ಟ್ಇಂಡೀಸ್ ನ ಚಿಕ್ಕ ದ್ವೀಪ ಕ್ಯೂರಸೌ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿರುವ ಅತ್ಯಂತ ಪುಟ್ಟ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇವಲ 1,56,000 ಜನಸಂಖ್ಯೆ ಹೊಂದಿರುವ ಕ್ಯೂರಸೌ ದೇಶದ ಫುಟ್ಬಾಲ್ ತಂಡಕ್ಕೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಡ್ರಾ ಸಾಧಿಸುವ ಅಗತ್ಯವಿತ್ತು.
‘ಬ್ಲ್ಯೂ ವೇವ್’ ಎಂದೇ ಖ್ಯಾತಿ ಪಡೆದಿರುವ ಕ್ಯೂರಸೌ ತಂಡವು ಆರು ಪಂದ್ಯಗಳಲ್ಲಿ 12 ಅಂಕ ಗಳಿಸಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಿತು.
ಇದೇ ಮೊದಲ ಬಾರಿ 2026ರ ಆವೃತ್ತಿಯ ಫಿಫಾ ವಿಶ್ವಕಪ್ನಲ್ಲಿ 48 ತಂಡಗಳು ಭಾಗವಹಿಸುತ್ತಿವೆ. ಕ್ಯೂರಸೌ ವಿಶ್ವಕಪ್ ಗೆ ಅರ್ಹತೆ ಪಡೆದ ಅತ್ಯಂತ ಪುಟ್ಟ ರಾಷ್ಟ್ರವಾಗಿದೆ.
2018ರಲ್ಲಿ ಸುಮಾರು 3,50,000 ಜನಸಂಖ್ಯೆಯನ್ನು ಹೊಂದಿದ್ದ ಐಸ್ಲ್ಯಾಂಡ್ ಫುಟ್ಬಾಲ್ ವಿಶ್ವಕಪ್ಗೆ ಅರ್ಹತೆ ಪಡೆದಿರುವ ಚಿಕ್ಕ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಗಿತ್ತು.
*1974ರ ನಂತರ ವಿಶ್ವಕಪ್ ಗೆ ಅರ್ಹತೆ ಪಡೆದ ಹೈಟಿ
ನಿಕರಾಗುವಾ ತಂಡವನ್ನು ಮಂಗಳವಾರ 2-0 ಗೋಲುಗಳ ಅಂತರದಿಂದ ಮಣಿಸಿರುವ ಹೈಟಿ ತಂಡವು ಎರಡನೇ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡುವ ಅವಕಾಶ ಪಡೆದಿದೆ.
ಒಟ್ಟು 11 ಅಂಕ ಪಡೆದಿರುವ ಹೈಟಿ ತಂಡವು 1974ರ ನಂತರ ಮೊದಲ ಬಾರಿ ಫಿಫಾ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದೆ.
ತನ್ನ ದೇಶದಲ್ಲಿನ ರಾಜಕೀಯ ಅಶಾಂತಿಯಿಂದಾಗಿ ತನ್ನ ತವರು ಪಂದ್ಯಗಳನ್ನು ಕ್ಯೂರಸಾದಲ್ಲಿ ಆಡಿರುವ ಹೈಟಿ ತಂಡ ಕೋಚ್ ಇಲ್ಲದೆ ಆಡುತ್ತಿದೆ. 18 ತಿಂಗಳ ಹಿಂದೆ ಸೆಬಾಸ್ಟಿಯನ್ ಮಿಗ್ನೆ ಕೋಚ್ ಆಗಿ ನೇಮಕಗೊಂಡಿದ್ದರೂ ತಂಡದೊಂದಿಗೆ ಸೇರಿಕೊಂಡಿಲ್ಲ. ಆದರೆ ಅವರು ಹೈಟಿ ತಂಡ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ನೆರವಾಗಿದ್ದಾರೆ.







