Glasgow 2026 Commonwealth Games | ಲಾನ್ ಬೌಲ್ಸ್: ಭಾರತೀಯ ಮಹಿಳಾ ಜೋಡಿಗೆ ಮೊದಲ ಸೋಲು

Photo Credit : SAI Media/X
ಗ್ಲಾಸ್ಗೊ, ಜು. 26: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ಜೋಡಿ ಲಾನ್ ಬೌಲ್ಸ್ ಸ್ಪರ್ಧೆಯ ‘ಬಿ’ ಗುಂಪಿನ ಪಂದ್ಯದಲ್ಲಿ ರವಿವಾರ ಭಾರತದ ರೂಪಾ ರಾಣಿ ತಿರ್ಕೆ ಮತ್ತು ಪಿಂಕಿ ಸಿಂಗ್ ಜೋಡಿಯನ್ನು ನಮೀಬಿಯಾದ ಅಮಂಡಾ ಸ್ಟೀನ್ಕ್ಯಾಂಪ್ ಮತ್ತು ಡಯಾನಾ ವಿಲ್ಜೊಯೆನ್ ಜೋಡಿ ಸೋಲಿಸಿತು.
ಇದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಎದುರಾದ ಮೊದಲ ಪರಾಭವವಾಗಿದೆ. ಭಾರತೀಯ ಜೋಡಿಯು ಐದು ಅಂಕಗಳ ಮುನ್ನಡೆಯನ್ನು ಕೈಚೆಲ್ಲಿ ಮೊದಲ ಸೆಟ್ನ್ನು ಸೋತಿತು. ಆದರೆ, ಎರಡನೇ ಸೆಟ್ನಲ್ಲಿ ತೀವ್ರ ಪ್ರತಿಹೋರಾಟ ನೀಡಿ ಆ ಸೆಟ್ನ್ನು ಗೆದ್ದಿತು. ಹಾಗಾಗಿ ಪಂದ್ಯವು ಟೈಬ್ರೇಕರ್ ಗೆ ಹೋಯಿತು.
ಆದರೆ, ನಿರ್ಣಾಯಕ ಸೆಟ್ ನಲ್ಲಿ ಭಾರತೀಯ ಜೋಡಿಯು 3-0 ಅಂತರದಿಂದ ಪರಾಭವಗೊಂಡಿತು.
ಆದರೂ, ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೈಬ್ರೇಕರ್ನಲ್ಲಿ ಸೋತಿದ್ದರಿಂದ ಭಾರತದ ನಾಕೌಟ್ ಅರ್ಹತೆಯ ಆಸೆ ಜೀವಂತವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಗುಂಪಿನ ಅಂತಿಮ ಪಂದ್ಯವು ಯಾವ ತಂಡ ಮುಂದಿನ ಹಂತಕ್ಕೇರಲಿದೆ ಎಂಬುದನ್ನು ನಿರ್ಧರಿಸಲಿದೆ.




