100ನೇ ಟೆಸ್ಟ್ ಪಂದ್ಯವನ್ನಾಡಿದ ನಂತರ ನಿವೃತ್ತಿಯಾಗಲಿರುವ ಡಿ.ಕರುಣರತ್ನೆ

ಡಿಮುತ್ ಕರುಣರತ್ನೆ | PTI
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಡಿಮುತ್ ಕರುಣರತ್ನೆ ತನ್ನ 100ನೇ ಟೆಸ್ಟ್ ಪಂದ್ಯವನ್ನಾಡಿದ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ಗುರುವಾರದಿಂದ ಗಾಲೆಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ 2ನೇ ಟೆಸ್ಟ್ ಪಂದ್ಯವು ಕರುಣರತ್ನೆ ಅವರ ಕೊನೆಯ ಪಂದ್ಯವಾಗಲಿದೆ.
ಶ್ರೀಲಂಕಾದ ಓರ್ವ ಅತ್ಯಂತ ಯಶಸ್ವಿ ಬ್ಯಾಟರ್ ಆಗಿರುವ 36ರ ಹರೆಯದ ಕರುಣರತ್ನೆ ಸುಮಾರು 14 ವರ್ಷಗಳ ವೃತ್ತಿಜೀವನದಲ್ಲಿ 99 ಟೆಸ್ಟ್ ಪಂದ್ಯಗಳಲ್ಲಿ 16 ಶತಕಗಳು ಹಾಗೂ 34 ಅರ್ಧಶತಕಗಳ ಸಹಿತ 40ರ ಸರಾಸರಿಯಲ್ಲಿ 7,172 ರನ್ ಗಳಿಸಿದ್ದಾರೆ. 50 ಏಕದಿನ ಪಂದ್ಯಗಳನ್ನು ಆಡಿರುವ ಕರುಣರತ್ನೆ ಒಂದು ಶತಕ ಹಾಗೂ 11 ಅರ್ಧಶತಕಗಳ ಸಹಿತ 1,316 ರನ್ ಗಳಿಸಿದ್ದಾರೆ.
‘‘ಒಬ್ಬ ಟೆಸ್ಟ್ ಆಟಗಾರನು ಒಂದು ವರ್ಷದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲು ತನ್ನ ಫಾರ್ಮ್ ಅನ್ನು ಉಳಿಸಿಕೊಳ್ಳುವುದು ಕಷ್ಟಕರ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪರಿಚಯಿಸಿದ ನಂತರ ಕಳೆದ ಎರಡು-ಮೂರು ವರ್ಷಗಳಲ್ಲಿ ನಾವು ಬಹಳ ಕಡಿಮೆ ದ್ವಿಪಕ್ಷೀಯ ಸರಣಿ ಆಡಿದ್ದೇವೆ. ನನ್ನ ಪ್ರಸ್ತುತ ಫಾರ್ಮ್ ನನ್ನ ನಿರ್ಧಾರಕ್ಕೆ ಮತ್ತೊಂದು ಕಾರಣ. 2023-25ರ ಡಬ್ಲ್ಯುಟಿಸಿ ಋತುವಿನ ಅಂತ್ಯಕ್ಕೆ ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ’’ ಎಂದು ಕರುಣರತ್ನೆ ‘ಡೈಲಿ ಎಫ್ಟಿ’ಗೆ ತಿಳಿಸಿದ್ದಾರೆ.
ಫೆಬ್ರವರಿ 14ರಿಂದ 16ರ ತನಕ ಎಸ್ಎಲ್ಸಿ ಪ್ರಮುಖ ಕ್ಲಬ್ ಪರ ಎನ್ಸಿಸಿ ವಿರುದ್ಧ 3 ದಿನಗಳ ಟೂರ್ನಿಯಲ್ಲಿ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್(ಎಸ್ಎಸ್ಸಿ) ನಲ್ಲಿ ತನ್ನ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಕರುಣರತ್ನೆ ಆಡಲಿದ್ದಾರೆ.
ಸದ್ಯ ಕಳಪೆ ಫಾರ್ಮ್ನಲ್ಲಿರುವ ಕರುಣರತ್ನೆ ಆಸ್ಟ್ರೇಲಿಯದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 7 ರನ್ ಹಾಗೂ ಶೂನ್ಯ ಸಂಪಾದಿಸಿದ್ದರು. ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 242 ರನ್ಗಳಿಂದ ಸೋತಿರುವ ಶ್ರೀಲಂಕಾ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
‘‘ಯಾವುದೇ ಕ್ರಿಕೆಟಿಗ 100 ಟೆಸ್ಟ್ ಆಡುವುದು ಹಾಗೂ 10,000 ರನ್ ಗಳಿಸುವ ಕನಸು ಕಾಣುತ್ತಾನೆ. ಇದೊಂದು ದೊಡ್ಡ ಸಾಧನೆ. ಕ್ರಿಕೆಟ್ ಆಡಲು ಆರಂಭಿಸಿದಾಗ ನಾವು ಗುರಿಗಳ ಬಗ್ಗೆ ಯೋಚಿಸುವುದಿಲ, ಆದರೆ, ಆಡುವುದನ್ನು ಮುಂದುವರಿಸಿದಾಗ ವಿಭಿನ್ನ ಗುರಿಗಳು ಇರುತ್ತವೆ’’ ಎಂದು ಕರುಣರತ್ನೆ ಹೇಳಿದ್ದಾರೆ.