ಅಪಾಯಕಾರಿ ಪಿಚ್: ಅರ್ಧದಲ್ಲೇ ನಿಂತ ಬಿಬಿಎಲ್ ಪಂದ್ಯ

Photo: @cricketcomau \ X
ಮೆಲ್ಬರ್ನ್: ಪಿಚ್ ಅಪಾಯಕಾರಿಯಾಗಿ ವರ್ತಿಸುತ್ತಿದೆ ಎಂಬ ಕಾರಣಕ್ಕಾಗಿ ಮೆಲ್ಬರ್ನ್ ರೆನಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವೆ ನಡೆಯುತ್ತಿದ್ದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) 2023 ಪಂದ್ಯವೊಂದನ್ನು ಅಂಪಯರ್ ಗಳು ಅರ್ಧದಲ್ಲೇ ನಿಲ್ಲಿಸಿದ ಘಟನೆ ರವಿವಾರ ವರದಿಯಾಗಿದೆ.
ಮೆಲ್ಬರ್ನ್ ಸಮೀಪದ ಗೀಲಾಂಗ್ನ ಮೈದಾನದಲ್ಲಿ ಪಂದ್ಯ ನಡೆಯುತ್ತಿತ್ತು. ಹಲವು ಬಾರಿ ಚೆಂಡು ಡಿಢೀರನೆ ಪುಟಿದಿತ್ತು ಹಾಗೂ ಬ್ಯಾಟರ್ ಗಳ ಸುರಕ್ಷತೆಗೆ ಅಪಾಯ ಒಡ್ಡುತ್ತಿತ್ತು.
ಪರ್ತ್ ಸ್ಕಾರ್ಚರ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ, ಮೆಲ್ಬರ್ನ್ ರೆನಗೇಡ್ಸ್ ಬೌಲಿಂಗ್ ಮಾಡುತ್ತಿತ್ತು. 6.5 ಓವರುಗಳ ಬೌಲಿಂಗ್ ನಡೆದ ಬಳಿಕ, ಅಂಪಯರ್ ಗಳು ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು. ಅವರು ಈ ವಿಷಯದಲ್ಲಿ ಸಂಘಟಕರೊಂದಿಗೆ ಮಾತುಕತೆ ನಡೆಸಿದರು.
ಪಿಚ್ನಲ್ಲಿ ತೇವಾಂಶದಿಂದ ಕೂಡಿದ ಸ್ಥಳವಿದ್ದುದರಿಂದ ಸಮಸ್ಯೆಯು ಗಂಭೀರವಾಗಿತ್ತು ಎನ್ನಲಾಗಿದೆ. ಅದು ಬ್ಯಾಟರ್ ಗಳಿಗೆ ಪಾಯದ ಅಂಶವಾಗಿತ್ತು. ಬೌಲರುಗಳು ಆ ಸ್ಥಳದಲ್ಲಿ ಚೆಂಡು ಹಾಕುವಾಗಲೆಲ್ಲ ಚೆಂಡು ತೀವ್ರ ತಿರುವುಗಳೊಂದಿಗೆ ಪುಟಿಯುತ್ತಿತ್ತು. ಅದೂ ಅಲ್ಲದೆ, ಪಿಚ್ ನಲ್ಲಿ ಅಲ್ಲಲ್ಲಿ ಕುಳಿಗಳೂ ಗೋಚರಿಸುತ್ತಿದ್ದವು. ಅದು ಉಭಯ ತಂಡಗಳ ಆಟಗಾರ ಕಳವಳಕ್ಕೆ ಕಾರಣವಾಗಿತ್ತು.
ಮುನ್ನಾ ದಿನ ರಾತ್ರಿ ಸುರಿದ ಮಳೆಯಿಂದಾಗಿ ಗೀಲಾಂಗ್ ಸ್ಟೇಡಿಯಮ್ ಒದ್ದೆಯಾಗಿತ್ತು. ನೀರು ಅದು ಹೇಗೋ ನೀರು ಹೊದಿಕೆಗಳ ಒಳಗೆ ಸೋರಿಕೆಯಾಗಿ ಈ ಪರಿಸ್ಥಿತಿ ಉಂಟಾಗಿತ್ತು ಎಂದು ಹೇಳಲಾಗಿದೆ.
ಕಾಮೆಂಟರಿ ಬಾಕ್ಸ್ ನಲ್ಲಿ ಪಂದ್ಯ ಮುಂದವರಿಯುವ ಬಗ್ಗೆ ಚರ್ಚೆ ನಡೆಯಿತು. ಪಂದ್ಯ ಮುಂದುವರಿಯಬೇಕೇ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಆಸ್ಟ್ರೇಲಿಯ ತಂಡದ ಮಾಜಿ ಆಟಗಾರ ಆ್ಯಡಮ್ ಗಿಲ್ ಕ್ರಿಸ್ಟ್ ರನ್ನು ಪ್ರಶ್ನಿಸಿದರು. “ಅಲ್ಲಿ ನಿಜವಾಗಿಯೂ ಬ್ಯಾಟರ್ ಗಳಿಗೆ ಅಪಾಯವಿದೆಯೇ ಅಥವಾ ಅಲ್ಲಿ ಬ್ಯಾಟಿಂಗ್ ಮಾಡಲು ಮಾತ್ರ ಕಷ್ಟವಾಗುತ್ತಿದೆಯೇ'' ಎಂದು ಮೈಕಲ್ ವಾನ್ ಕೇಳಿದರು.
“ಅಲ್ಲಿ ನೈಜ ಅಪಾಯ ಎಂದು ನನಗನಿಸುತ್ತದೆ'' ಎಂದು ಗಿಲ್ ಕ್ರಿಸ್ಟ್ ಉತ್ತರಿಸಿದರು.
ಆ ಪಂದ್ಯವನ್ನು ಬಳಿಕ ರದ್ದುಗೊಳಿಸಲಾಯಿತು.







