ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಡನೀಲ್ ಮೆಡ್ವೆಡೆವ್

PC :x/@TheTennisLetter
ಬ್ರಿಸ್ಬೇನ್, ಜ. 11: ರಷ್ಯಾದ ಡನೀಲ್ ಮೆಡ್ವೆಡೆವ್ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ರವಿವಾರ ಬ್ರಿಸ್ಬೇನ್ ನ ಪ್ಯಾಟ್ ರಾಫ್ಟರ್ ಅರೀನಾದಲ್ಲಿ ನಡೆದ ಫೈನಲ್ ನಲ್ಲಿ ಮೂರು ಬಾರಿ ಆಸ್ಟ್ರೇಲಿಯನ್ ಓಪನ್ ರನ್ನರ್ಸ್-ಅಪ್ ಆಗಿರುವ ಮೆಡ್ವೆಡೆವ್ ಅಮೆರಿಕದ ಬ್ರಾಂಡನ್ ನಕಶಿಮರನ್ನು 6-2, 7-6 (7/1) ಸೆಟ್ಗಳಿಂದ ಮಣಿಸಿದರು. ಪಂದ್ಯವು 96 ನಿಮಿಷಗಳ ಕಾಲ ನಡೆಯಿತು. ಇದು ಅವರ 22ನೇ ಎಟಿಪಿ ಟೂರ್ ಪ್ರಶಸ್ತಿಯಾಗಿದೆ.
ಹದಿಮೂರನೇ ವಿಶ್ವ ರ್ಯಾಂಕಿಂಗ್ನ ರಷ್ಯಾದ ಆಟಗಾರನನ್ನು ನಿಭಾಯಿಸುವುದು ಬ್ರಾಂಡನ್ ನಕಶಿಮಗೆ ಕಷ್ಟವಾಯಿತು. ಮೊದಲ ಸೆಟ್ ನಲ್ಲಿ ಮೆಡ್ವೆಡೆವ್ ಎರಡು ಬಾರಿ ನಕಶಿಮರ ಸರ್ವ್ ಮುರಿದು ಎದುರಾಳಿಗೆ ಆಘಾತ ನೀಡಿದರು. ಬಳಿಕ ಕ್ಷಿಪ್ರವಾಗಿ ಆ ಸೆಟ್ ಅನ್ನು ಗೆದ್ದರು.
ಆದರೆ, ಎರಡನೇ ಸೆಟ್ ನಲ್ಲಿ ತೀವ್ರ ಪ್ರತಿರೋಧ ಒಡ್ಡಿದ ನಕಶಿಮ ಪಂದ್ಯವನ್ನು ಟೈಬ್ರೇಕ್ ಗೆ ಒಯ್ದರು. ಆದರೆ, ಟೈಬ್ರೇಕ್ ಅನ್ನು ಸುಲಭವಾಗಿ ಗೆದ್ದ ಮೆಡ್ವೆಡೆವ್ ಪಂದ್ಯವನ್ನು ತಮ್ಮದಾಗಿಸಿಕೊಂಡರು.
“ಇದು ನನ್ನ ವರ್ಷದ ಉತ್ತಮ ಆರಂಭ,” ಎಂದು ಮೆಡ್ವೆಡೆವ್ ಹೇಳಿದರು. ಅವರು 2019ರಲ್ಲಿ ಬ್ರಿಸ್ಬೇನ್ ನಲ್ಲಿ ಫೈನಲ್ ತಲುಪಿದ್ದರು.







