ರೋಹಿತ್ ಶರ್ಮಾ ಪ್ರಾಬಲ್ಯ ಅಂತ್ಯ! | ಡ್ಯಾರಿಲ್ ಮಿಚೆಲ್ ವಿಶ್ವದ ನಂ.1 ಏಕದಿನ ಬ್ಯಾಟರ್

Photo Credit - timesofindia
ದುಬೈ, ನ.19: ನ್ಯೂಝಿಲ್ಯಾಂಡ್ ಆಟಗಾರ ಡ್ಯಾರಿಲ್ ಮಿಚೆಲ್ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾರ ಅವರ ಪ್ರಾಬಲ್ಯವನ್ನು ಅಂತ್ಯಗೊಳಿಸಿ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ ನ್ಯೂಝಿಲ್ಯಾಂಡ್ನ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈಗ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆಕರ್ಷಕ ಶತಕ ಗಳಿಸಿರುವ ಮಿಚೆಲ್ ಈ ಸಾಧನೆ ಮಾಡಿದ್ದಾರೆ. ಏಳನೇ ಶತಕವನ್ನು ದಾಖಲಿಸಿರುವ ಮಿಚೆಲ್ ಅವರು ರೋಹಿತ್ ಶರ್ಮಾರನ್ನು ಹಿಂದಿಕ್ಕಿ ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ ಸ್ಥಾನಕ್ಕೇರಿದ್ದಾರೆ.
ಈ ಮೂಲಕ ಮಿಚೆಲ್ ಅವರು ಕಿವೀಸ್ ದಿಗ್ಗಜ ಗ್ಲೆನ್ ಟರ್ನರ್ ಸಾಧನೆಯನ್ನು ಸರಿಗಟ್ಟಿದರು. ಟರ್ನರ್ 1979ರಲ್ಲಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರಿದ ನ್ಯೂಝಿಲ್ಯಾಂಡ್ನ ಏಕೈಕ ಆಟಗಾರನಾಗಿದ್ದರು. ಆಂಡ್ರೂ ಜೋನ್ಸ್, ರೋಜರ್ ಟೌಸ್, ನಾಥನ್ ಅಸ್ಟ್ಲೆ, ಕೇನ್ ವಿಲಿಯಮ್ಸನ್, ಮಾರ್ಟಿನ್ ಗಪ್ಟಿಲ್ ಹಾಗೂ ರೋಸ್ ಟೇಲರ್ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಟರ್ನರ್ ಸಾಧನೆಯನ್ನು ಸರಿಗಟ್ಟಲು ಯಾರಿಗೂ ಸಾಧ್ಯವಾಗಿರಲಿಲ್ಲ.
ಶ್ರೀಲಂಕಾದ ವಿರುದ್ಧ ಇತ್ತೀಚೆಗೆ 3-0 ಅಂತರದಿಂದ ಪಾಕಿಸ್ತಾನ ತಂಡ ಕ್ಲೀನ್ ಸ್ವೀಪ್ ಸಾಧಿಸಿದ ನಂತರ ಕೆಲವು ಆಟಗಾರರು ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಡ್ತಿ ಪಡೆದಿದ್ದಾರೆ. ಮುಹಮ್ಮದ್ ರಿಝ್ವಾನ್ ಐದು ಸ್ಥಾನ ಮೇಲಕ್ಕೇರಿ 22ನೇ ಸ್ಥಾನ ತಲುಪಿದರೆ, ಫಖರ್ ಝಮಾನ್ ಐದು ಸ್ಥಾನ ಭಡ್ತಿ ಪಡೆದು 26ನೇ ಸ್ಥಾನ ತಲುಪಿದರು.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಬ್ರಾರ್ ಅಹ್ಮದ್ 11 ಸ್ಥಾನ ಮೇಲಕ್ಕೇರಿ 9ನೇ ಸ್ಥಾನವನ್ನೂ ಹಾಗೂ ಹಾರಿಸ್ ರವೂಫ್ 23ನೇ ಸ್ಥಾನಕ್ಕೇರಿದರು. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.







