ಮಾಜಿ ವೇಗದ ಬೌಲರ್ ಡೇವಿಡ್ ಲಾರೆನ್ಸ್ ನಿಧನ
ಕೈಗೆ ಕಪ್ಪುಪಟ್ಟಿ ಧರಿಸಿ ಆಡಿದ ಭಾರತ-ಇಂಗ್ಲೆಂಡ್ ಕ್ರಿಕೆಟ್ ಆಟಗಾರರು

ಡೇವಿಡ್ ಲಾರೆನ್ಸ್ | PC : X \ @TheBarmyArmy
ಲೀಡ್ಸ್: ಇತ್ತೀಚೆಗೆ ನಿಧನರಾದ ಇಂಗ್ಲೆಂಡ್ನ ಮಾಜಿ ವೇಗದ ಬೌಲರ್ ಡೇವಿಡ್ ಲಾರೆನ್ಸ್ಗೆ ಗೌರವಾರ್ಥ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ 3ನೇ ದಿನವಾದ ರವಿವಾರ ಉಭಯ ತಂಡಗಳ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಆಡಿದ್ದಾರೆ.
ಅಲ್ಪಾವಧಿಯ ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ಗಮನಾರ್ಹ ಕೊಡುಗೆ ನೀಡಿದ ಕ್ರಿಕೆಟಿಗನಿಗೆ ಗೌರವದ ಸಂಕೇತವಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
‘ನಮ್ಮನ್ನು ಅಗಲಿರುವ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಡೇವಿಡ್ ಲಾರೆನ್ಸ್ ಅವರಿಗೆ ಗೌರವ ಸಲ್ಲಿಸಲು ಎರಡೂ ತಂಡಗಳು ಕಪ್ಪು ಪಟ್ಟಿಗಳನ್ನು ಧರಿಸಿವೆ. 3ನೇ ದಿನದ ಆಟ ಆರಂಭವಾಗುವ ಮೊದಲು ಒಂದು ಕ್ಷಣ ಮೌನ ಪ್ರಾರ್ಥನೆ ಮಾಡಲಾಯಿತು’ ಎಂದು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಭಾರತೀಯ ತಂಡವು ಗೌರವ ಸಲ್ಲಿಸಲು ಸಾಲುಗಟ್ಟಿ ನಿಂತಿರುವ ಚಿತ್ರವನ್ನೂ ಬಿಸಿಸಿಐ ಪೋಸ್ಟ್ ಮಾಡಿದೆ.
ಲಾರೆನ್ಸ್ ತನ್ನ 61ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1964ರಲ್ಲಿ ಗ್ಲೌಸೆಸ್ಟರ್ನಲ್ಲಿ ಜನಿಸಿದ್ದ ಲಾರೆನ್ಸ್ ಅವರು 1988ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. 5 ಟೆಸ್ಟ್ ಹಾಗೂ 1 ಏಕದಿನ ಪಂದ್ಯವನ್ನು ಆಡಿದ್ದರು. 1991ರಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ನೀಡಿದ ಲಾರೆನ್ಸ್, ವೆಸ್ಟ್ಇಂಡೀಸ್ ವಿರುದ್ಧ ದಿ ಓವಲ್ನಲ್ಲಿ 106 ರನ್ಗೆ 5 ವಿಕೆಟ್ಗಳನ್ನು ಕಬಳಿಸಿದ್ದರು. 1992ರಲ್ಲಿ ನ್ಯೂಝಿಲ್ಯಾಂಡ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಮೊಣಕಾಲಿನ ಭೀಕರ ಗಾಯದಿಂದಾಗಿ ಅವರ ಭರವಸೆಯ ವೃತ್ತಿಜೀವನ ಮೊಟಕುಗೊಂಡಿತು.
ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಬ್ರಿಟನ್ ಮೂಲದ ಮೊದಲ ಕಪ್ಪು ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಕ್ರಿಕೆಟ್ನಲ್ಲಿ ವೈವಿದ್ಯತೆಯ ಚಳುವಳಿಯ ಪ್ರಮುಖ ವ್ಯಕ್ತಿಯಾಗಿದ್ದರು. 2024ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಲಾರೆನ್ಸ್ಗೆ ಎಂಬಿಇ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಇಸಿಬಿಯ ಗೌರವ ಆಜೀವ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಯಿತು.







