ದಕ್ಷಿಣ ಆಫ್ರಿಕ ದುಬೈಗೆ ಹೋಗಿ ವಾಪಸ್ ಬಂದಿರುವುದು ‘‘ಆದರ್ಶ ಸಂಗತಿಯಲ್ಲ’’ : ಡೇವಿಡ್ ಮಿಲ್ಲರ್

ಡೇವಿಡ್ ಮಿಲ್ಲರ್ | PC : NDTV
ಮುಂಬೈ : ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಗೆ ಮುನ್ನ ನಮ್ಮ ತಂಡವು ದುಬೈಗೆ ಹೋಗಿ ಯಾವುದೇ ಪಂದ್ಯವನ್ನು ಆಡದೆ ವಾಪಸ್ ಬಂದಿರುವುದು ಆದರ್ಶ ಸಂಗತಿಯಲ್ಲ ಎಂದು ದಕ್ಷಿಣ ಆಫ್ರಿಕದ ಬ್ಯಾಟರ್ ಡೇವಿಡ್ ಮಿಲ್ಲರ್ ಹೇಳಿದ್ದಾರೆ.
ಅಂತಿಮವಾಗಿ ದಕ್ಷಿಣ ಆಫ್ರಿಕವು ತನ್ನ ಸೆಮಿಫೈನಲ್ ಪಂದ್ಯವನ್ನು ಲಾಹೋರ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಿತು ಮತ್ತು ಸೋಲನುಭವಿಸಿತು.
ಸೆಮಿಫೈನಲ್ಗೆ ಮುನ್ನ ಅಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ಎರಡೂ ತಂಡಗಳು ಪಾಕಿಸ್ತಾನದಿಂದ ದುಬೈಗೆ ಪ್ರಯಾಣಿಸಬೇಕಾಗಿ ಬಂದ ನಂತರ, ಪಂದ್ಯಾವಳಿಯ ಗೊಂದಲದ ವೇಳಾಪಟ್ಟಿಯ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮೊದಲ ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಆಡುವುದಕ್ಕಾಗಿ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ಎರಡೂ ತಂಡಗಳು ದುಬೈಗೆ ಪ್ರಯಾಣಿಸಿದ್ದವು. ದಕ್ಷಿಣ ಆಫ್ರಿಕವು ಅಲ್ಲಿ ಸುಮಾರು ಒಂದು ದಿನ ಇದ್ದ ಬಳಿಕ ಯಾವುದೇ ಪಂದ್ಯವನ್ನು ಆಡದೆ ಪಾಕಿಸ್ತಾನಕ್ಕೆ ವಾಪಸಾಯಿತು. ಆಸ್ಟ್ರೇಲಿಯ ಅಲ್ಲಿಯೇ ತಂಗಿತು ಹಾಗೂ ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಆಡಿ ಸೋತಿತು.
ಭಾರತವು ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಹೋಗದೆ ಚಾಂಪಿಯನ್ಸ್ ಟ್ರೋಫಿಯ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿರುವುದು ಈ ಗೊಂದಲಕಾರಿ ವೇಳಾಪಟ್ಟಿಗೆ ಕಾರಣವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
‘‘ಅದು ಕೇವಲ ಒಂದು ಗಂಟೆ 40 ನಿಮಿಷದ ಪ್ರಯಾಣ. ಆದರೆ, ವಾಸ್ತವ ಸಂಗತಿಯೆಂದರೆ, ಆ ಪ್ರಯಾಣವನ್ನು ನಾವು ಮಾಡಬೇಕಾಗಿರಲಿಲ್ಲ’’ ಎಂದು ಮಿಲ್ಲರ್ ಹೇಳಿದರು. ಬುಧವಾರ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕವು 50 ರನ್ಗಳಿಂದ ಸೋತ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸ್ವಲ್ಪವೇ ಹೊತ್ತಿನ ಬಳಿಕ ದಕ್ಷಿಣ ಆಫ್ರಿಕವು ದುಬೈಗೆ ಪ್ರಯಾಣಿಸಿತು. ಅಂತಿಮವಾಗಿ ಅದು ವ್ಯರ್ಥ ಪ್ರಯಾಣವಾಯಿತು.
‘‘ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ನಾವು ಪ್ರಯಾಣಿಸಿದೆವು. ನಾವು ಪ್ರಯಾಣಿಸಲೇ ಬೇಕಾಗಿತ್ತು. ನಾವು ಸಂಜೆ 4 ಗಂಟೆಗೆ ದುಬೈ ತಲುಪಿದೆವು. ಮಾರನೇ ದಿನ ಬೆಳಗ್ಗೆ 7:30ಕ್ಕೆ ನಾವು ವಾಪಸ್ ಬರೆಬೇಕಾಯಿತು. ಇದು ಆದರ್ಶ ಸಂಗತಿಯಲ್ಲ’’ ಎಂದು ಮಿಲ್ಲರ್ ಹೇಳಿದರು.
‘‘ನಾವೇನು ಐದು ಗಂಟೆ ಪ್ರಯಾಣ ಮಾಡಿದ್ದೇವೆ ಎಂದಲ್ಲ. ಚೇತರಿಸಿಕೊಳ್ಳಲು ಮತ್ತು ಸುಧಾರಿಸಿಕೊಳ್ಳಲು ನಮಗೆ ತುಂಬಾ ಸಮಯವಿತ್ತು. ಆದರೂ, ಅದೊಂದು ಸರಿಯಾದ ವಿಷಯವಲ್ಲ’’ ಎಂದರು.
ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕವು 50 ರನ್ಗಳ ಸೋಲನುಭವಿಸಿದೆ. ಮಿಲ್ಲರ್ 67 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ದುಬೈನಲ್ಲಿ ರವಿವಾರ ನಡೆಯುವ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ಭಾರತವನ್ನು ಎದುರಿಸಲಿದೆ.







