ಡೇವಿಸ್ ಕಪ್: ಸ್ವಿಟ್ಸರ್ ಲ್ಯಾಂಡ್ ವಿರುದ್ಧ ಭಾರತಕ್ಕೆ ಜಯ

PC | x
ಬೀಲ್, ಸೆ.14: ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯವನ್ನು ಗೆಲ್ಲುವ ಮೂಲಕ ಸುಮಿತ್ ನಾಗಲ್ ಅವರು ಸ್ವಿಟ್ಸರ್ಲ್ಯಾಂಡ್ ತಂಡದ ವಿರುದ್ದ ಭಾರತ ಟೆನಿಸ್ ತಂಡವು ಡೇವಿಸ್ ಕಪ್ ಪಂದ್ಯವನ್ನು 3-1 ಅಂತರದಿಂದ ಗೆಲುವು ಪಡೆಯಲು ನೆರವಾಗಿದ್ದಾರೆ.
ಭಾರತ ತಂಡವು 1993ರ ನಂತರ ಮೊದಲ ಬಾರಿ ಯುರೋಪ್ ನೆಲದಲ್ಲಿ ಗೆಲುವು ದಾಖಲಿಸಿದೆ.
ಶ್ರೀರಾಮ್ ಬಾಲಾಜಿ ಹಾಗೂ ಋತ್ವಿಕ್ ಚೌಧರಿ ಅವರು ಜಾಕಬ್ ಪೌಲ್ ಹಾಗೂ ಡೊಮಿನಿಕ್ ಸ್ಟ್ರೈಕರ್ ವಿರುದ್ಧ ತೀವ್ರ ಪೈಪೋಟಿಯಿಂದ ಕೂಡಿದ್ದ ಡಬಲ್ಸ್ ಪಂದ್ಯವನ್ನು 6-7(3), 4-6, 5-7 ಅಂತರದಿಂದ ಸೋತಾಗ ಆತಿಥೇಯ ಸ್ವಿಸ್ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ನಾಗಲ್ ಅವರು 18ರ ಹರೆಯದ ಹೆನ್ರಿ ಬೆರ್ನೆಟ್ರನ್ನು 6-1, 6-3 ಸೆಟ್ಗಳ ಅಂತರದಿಂದ ಮಣಿಸಿ ರೋಹಿತ್ ರಾಜ್ಪಾಲ್ ನಾಯಕತ್ವದ ತಂಡವು ಗೆಲುವು ದಾಖಲಿಸಲು ನೆರವಾಗಿದ್ದಾರೆ.
ಈ ಗೆಲುವಿನ ಮೂಲಕ ಭಾರತ ತಂಡವು ಮುಂದಿನ ವರ್ಷ ನಡೆಯಲಿರುವ ಕ್ವಾಲಿಫೈಯರ್ಸ್ಗೆ ಅರ್ಹತೆ ಪಡೆದಿದೆ. ಭಾರತವು ಈ ಹಿಂದೆ 2020ರ ಮಾರ್ಚ್ನಲ್ಲಿ ಈ ಹಂತ ತಲುಪಿತ್ತು. ಆಗ ಕ್ರೊಯೇಶಿಯಕ್ಕೆ ತೆರಳಿದ್ದ ಭಾರತ ತಂಡವು ಮರಿನ್ ಸಿಲಿಕ್ ನೇತೃತ್ವದ ತಂಡದ ವಿರುದ್ಧ 1-3 ಅಂತರದಿಂದ ಸೋತಿತ್ತು.
ಭಾರತ ತಂಡವು 1993ರಲ್ಲಿ ಯುರೋಪ್ನಲ್ಲಿ ಕೊನೆಯ ಬಾರಿ ಪಂದ್ಯವನ್ನು ಗೆದ್ದಿತ್ತು. ಆಗ ರಮೇಶ್ ಕೃಷ್ಣನ್ ಹಾಗೂ ಲಿಯಾಂಡರ್ ಅವರು ವರ್ಲ್ಡ್ ಗ್ರೂಪ್ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ 3-2 ಅಂತರದಿಂದ ರೋಚಕ ಜಯ ಸಾಧಿಸಿತ್ತು.
ದಕ್ಷಿಣೇಶ್ವರ ಸುರೇಶ್ ಅವರು ಸ್ವಿಸ್ನ ನಂ.1 ಆಟಗಾರ ಜೆರೊಮ್ ಕಿಮ್ರನ್ನು ನೇರ ಸೆಟ್ಗಳಿಂದ ಸೋಲಿಸಿದ ನಂತರ ನಾಗಲ್ 2ನೇ ಸಿಂಗಲ್ಸ್ ಪಂದ್ಯದಲ್ಲಿ ಮಾರ್ಕ್-ಆಂಡ್ರಿಯ ಹಸ್ಲೆರ್ರನ್ನು 6-3, 7-6(4) ಅಂತರದಿಂದ ಮಣಿಸಿದರು. ಇದರೊಂದಿಗೆ ಭಾರತವು ಮೊದಲನೇ ದಿನ ದಿನ 2-0 ಮುನ್ನಡೆ ಸಾಧಿಸಿತ್ತು.
2ನೇ ದಿನ ಡಬಲ್ಸ್ ಪಂದ್ಯದಲ್ಲಿ ಶ್ರೀರಾಮ್ ಬಾಲಾಜಿ ಹಾಗೂ ಋತ್ವಿಕ್ ಬೊಲ್ಲಿಪಲ್ಲಿ ಸ್ವಿಸ್ ಜೋಡಿ ವಿರುದ್ಧ ಸೋತರು.
ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಸ್ವಿಸ್ ತಂಡವು ತನ್ನ ನಂ.1 ಆಟಗಾರ ಕಿಮ್ ಬದಲಿಗೆ ಬೆರ್ನೆಟ್ಗೆ ಅವಕಾಶ ನೀಡಿತು. ಬೆರ್ನೆಟ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಆದರೆ ಬೆರ್ನೆಟ್ ನೇರ ಸೆಟ್ಗಳ ಅಂತರದಿಂದ ಸೋತಿದ್ದಾರೆ.







