ಆಸ್ಟ್ರೇಲಿಯ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ವಿಜೃಂಭಿಸುತ್ತಾರೆ : ಡಿ ವಿಲಿಯರ್ಸ್

ಅಭಿಷೇಕ್ ಶರ್ಮಾ , ಎಬಿ ಡಿ ವಿಲಿಯರ್ಸ್ | Photo Credit : PTI
ಮುಂಬೈ, ಅ. 6: ಆಸ್ಟ್ರೇಲಿಯದಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ವಿಜೃಂಭಿಸಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಾರೆ ಎಬಿ ಡಿ ವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಶ್ಯಕಪ್ ಪಂದ್ಯಾವಳಿಯಲ್ಲಿ ನೀಡಿರುವ ಅಮೋಘ ನಿರ್ವಹಣೆಯನ್ನೇ ಶರ್ಮಾ ಮುಂದುವರಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಏಶ್ಯಕಪ್ನಲ್ಲಿ ಅಭಿಷೇಕ್ ಶರ್ಮಾ 7 ಪಂದ್ಯಗಳಿಂದ 44.86ರ ಸರಾಸರಿ ಮತ್ತು 200ರ ಸ್ಟ್ರೈಕ್ರೇಟ್ನಲ್ಲಿ 314 ರನ್ಗಳನ್ನು ಕಲೆಹಾಕಿದ್ದಾರೆ. ಆ ಮೂಲಕ, ಟಿ20 ಕ್ರಿಕೆಟ್ನಲ್ಲಿ ತಾನೊಂದು ಬಲಿಷ್ಠ ಶಕ್ತಿ ಎನ್ನುವುದನ್ನು ನಿರೂಪಿಸಿದ್ದಾರೆ.
ಅಭಿಷೇಕ್ ಶರ್ಮಾರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯದಿಂದ ಇತ್ತೀಚಿನ ಪಂದ್ಯಗಳಲ್ಲಿ ಭಾರತ ತಂಡವು ಗಣನೀಯ ಪ್ರಯೋಜನವನ್ನು ಪಡೆದಿದೆ.
ಮುಂಬರುವ ಆಸ್ಟ್ರೇಲಿಯ ಪ್ರವಾಸವು ಭಿನ್ನ ಆಡುವ ಸ್ಥಿತಿಗತಿಯೊಂದಿಗೆ ಭಿನ್ನ ಸವಾಲುಗಳನ್ನು ಒಡ್ಡಲಿದೆ. ಆದರೆ, ಈ ಸ್ಥಿತಿಗತಿಗಳು ಶರ್ಮಾರ ಬ್ಯಾಟಿಂಗ್ ಶೈಲಿಗೆ ಹೊಂದಿಕೊಳ್ಳುತ್ತವೆ ಎಂದು ಡಿ ವಿಲಿಯರ್ಸ್ ಅಭಿಪ್ರಾಯಪಡುತ್ತಾರೆ.





