ಕಿವುಡರ ಒಲಿಂಪಿಕ್ಸ್: ಮೊದಲ ವೈಯಕ್ತಿಕ ಚಿನ್ನ ಗೆದ್ದ ಪ್ರಾಂಜಲಿ

ಪ್ರಾಂಜಲಿ | PC : sportstar.thehindu.com
ಟೋಕಿಯೊ, ನ.24: ಪ್ರಾಂಜಲಿ ಪ್ರಶಾಂತ್ ಧುಮಾಲ್ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಜಪಾನಿನಲ್ಲಿ ನಡೆಯುತ್ತಿರುವ 2025ರ ಆವೃತ್ತಿಯ ಡೆಫ್ಲಂಪಿಕ್ಸ್ನಲ್ಲಿ(ಕಿವುಡರ ಒಲಿಂಪಿಕ್ಸ್)ಎರಡನೇ ಚಿನ್ನ ಹಾಗೂ ಮೂರನೇ ಪದಕವನ್ನು ತನ್ನದಾಗಿಸಿಕೊಂಡರು.
ಸೋಮವಾರ ನಡೆದ ಫೈನಲ್ ನಲ್ಲಿ ಪ್ರಾಂಜಲಿ 34 ಸ್ಕೋರ್ ಗಳಿಸಿದರು. 32 ಅಂಕ ಗಳಿಸಿದ ಉಕ್ರೇನ್ನ ಹಲಿನಾ ಮೊಸಿನಾ ಬೆಳ್ಳಿ ಪದಕ ಗೆದ್ದರು. ಜಿವೊನ್ ಜೆಯೊನ್(30 ಅಂಕ)ಕಂಚಿನ ಪದಕ ತನ್ನದಾಗಿಸಿಕೊಂಡರು. ಭಾರತದ ಅನುಯಾ ಪ್ರಸಾದ್ ನಾಲ್ಕನೇ ಸ್ಥಾನ ಪಡೆದರು.
ಪ್ರಾಂಜಲಿ ಈ ಮೊದಲು ಅಭಿನವ್ ದೇಶ್ವಾಲ್ ಜೊತೆಗೂಡಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪ್ರಾಂಜಲಿ ವಿಶ್ವ ಡೀಫ್ ಕ್ವಾಲಿಫಿಕೇಶನ್ ಹಾಗೂ ಡೆಫ್ಲೆಂಪಿಕ್ಸ್ ದಾಖಲೆಯನ್ನು ಮುರಿದು ಅಗ್ರ 2 ಸ್ಥಾನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದಿದ್ದರು.
ಈಗ ನಡೆಯುತ್ತಿರುವ ಕಿವುಡರ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಗಳು ಏಳು ಚಿನ್ನ, ಆರು ಬೆಳ್ಳಿ ಹಾಗೂ ಮೂರು ಕಂಚು ಸಹಿತ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ. ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಫೈನಲ್ ಮೂಲಕ ನ.25ರಂದು ಶೂಟಿಂಗ್ ಸ್ಪರ್ಧೆಗಳು ಮುಕ್ತಾಯವಾಗಲಿವೆ.







