ಡೀಫ್ಲಿಂಪಿಕ್ಸ್: ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ಧನುಷ್

ಧನುಷ್ ಶ್ರೀಕಾಂತ್ , ಮುಹಮ್ಮದ್ ಮುರ್ತಾಝಾ | Credit: X/@OfficialNRAI
ಟೋಕಿಯೊ, ನ.16: ಜಪಾನ್ ರಾಜಧಾನಿಯಲ್ಲಿ ನಡೆಯುತ್ತಿರುವ 25ನೇ ಆವೃತ್ತಿಯ ಸಮ್ಮರ್ ಡೀಫ್ಲಿಂಪಿಕ್ಸ್ ನಲ್ಲಿ 10 ಮೀ. ಏರ್ ರೈಫಲ್ ನಲ್ಲಿ ವರ್ಲ್ಡ್ ಡೀಫ್ ದಾಖಲೆಯನ್ನು ಪುಡಿಗಟ್ಟಿದ ಧನುಷ್ ಶ್ರೀಕಾಂತ್ ಭಾರತ ತಂಡಕ್ಕೆ ಶೂಟಿಂಗ್ ನಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
ಫೈನಲ್ಸ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳುವ ಮೂಲಕ ಡೀಫ್ ಲಿಂಪಿಕ್ಸ್ ನ ಅರ್ಹತಾ ದಾಖಲೆಯನ್ನು ಮುರಿದಿದ್ದಾರೆ.
ಫೈನಲ್ಸ್ನಲ್ಲಿ 252.2 ಅಂಕದೊಂದಿಗೆ ತನ್ನದೇ ವಿಶ್ವ ದಾಖಲೆ(251.7)ಯನ್ನು ಉತ್ತಮಪಡಿಸಿಕೊಂಡ ಧನುಷ್ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇನ್ನೋರ್ವ ಸ್ಪರ್ಧಿ ಮುಹಮ್ಮದ್ ಮುರ್ತಾಝಾ 250.1 ಅಂಕ ಗಳಿಸಿ ಬೆಳ್ಳಿ ಜಯಿಸಿದರು.
ಮಹಿಳಾ ಶೂಟರ್ಗಳು ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಭಾರತವು ಮೊದಲ ದಿನದ ಸ್ಪರ್ಧಾವಳಿಯಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ಪದಕಗಳನ್ನು ಬಾಚಿಕೊಂಡಿದೆ.
ಮಹಿಳೆಯರ 10 ಮೀ. ಏರ್ ರೈಫಲ್ ಫೈನಲ್ನಲ್ಲಿ ಮಹಿತ್ ಸಂಧು 250.5 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿದರು. ಉಕ್ರೇನ್ ನ ವಿಯೊಲೆಟಾ ಲಿಕೋವಾ(252.4) ಚಿನ್ನ ಹಾಗೂ ಭಾರತದ ಕೋಮಲ್ ಮಿಲಿಂದರ್(228.3) ಕಂಚಿನ ಪದಕ ಗೆದ್ದಿದ್ದಾರೆ.





