Asian Games Hockey | ಎಂಟು ಗೋಲು ಗಳಿಸಿದ ದೀಪಿಕಾ; ಉಜ್ಬೇಕಿಸ್ತಾನ ತಂಡದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Photo Credit : PTI
ನಗೋಯ, ಸೆ.20: ಭಾರತದ ಮಹಿಳೆಯರ ಹಾಕಿ ತಂಡವು ಏಶ್ಯನ್ ಗೇಮ್ಸ್ ನಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದು, ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ ತಂಡವನ್ನು 19-0 ಗೋಲುಗಳ ಅಂತರದಿಂದ ಮಣಿಸಿತು.
ರವಿವಾರ ನಡೆದ ಪಂದ್ಯವು ಏಕಪಕ್ಷೀಯವಾಗಿ ಸಾಗಿದ್ದು, ಭಾರತ ತಂಡವು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿತು. ಪದೇ ಪದೇ ಉಜ್ಬೇಕಿಸ್ತಾನದ ರಕ್ಷಣಾ ಕೋಟೆಯನ್ನು ಭೇದಿಸಿತು. ದೀಪಿಕಾ ಪಂದ್ಯದ ಸ್ಟಾರ್ ಆಗಿ ಹೊರಹೊಮ್ಮಿದ್ದು, ಎಂಟು ಗೋಲುಗಳನ್ನು ಗಳಿಸಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದರು. ದೀಪಿಕಾ 8ನೇ, 22ನೇ, 25ನೇ, 33ನೇ, 36ನೇ, 38ನೇ, 41ನೇ ಹಾಗೂ 54ನೇ ನಿಮಿಷಗಳಲ್ಲಿ ಗೋಲು ಗಳಿಸಿ ಭಾರತದ ಗೋಲಿನ ಸುರಿಮಳೆಯ ನೇತೃತ್ವ ವಹಿಸಿದರು.
ಏಳನೇ ನಿಮಿಷದಲ್ಲಿ ಗೋಲು ಗಳಿಸಿದ ಲಾಲ್ರೆಂಸಿಯಾಮಿ ಭಾರತದ ಗೋಲು ಖಾತೆ ತೆರೆದರು. ದೀಪಿಕಾ ಒಂದು ನಿಮಿಷದ ನಂತರ ಭಾರತದ ಮುನ್ನಡೆ ಹೆಚ್ಚಿಸಿದರು. ಇಶಿಕಾ 11ನೇ ನಿಮಿಷದಲ್ಲಿ ಗೋಲು ಗಳಿಸಿದರು. 12ನೇ ನಿಮಿಷದಲ್ಲಿ ಗೋಲು ಗಳಿಸಿದ ಬಲ್ಜೀತ್ ಕೌರ್ ಭಾರತ ತಂಡದ ಮುನ್ನಡೆಯನ್ನು 4-0ಗೆ ವಿಸ್ತರಿಸಿದರು. ಆರು ನಿಮಿಷಗಳ ನಂತರ ನೇಹಾ ಮತ್ತೊಂದು ಫೀಲ್ಡ್ ಗೋಲು ಗಳಿಸಿದರು.
ದೀಪಿಕಾ ಪವರ್ಫುಲ್ ಡ್ರ್ಯಾಗ್ಫ್ಲಿಕ್ ಮೂಲಕ ಪೆನಾಲ್ಟಿ ಕಾರ್ನರ್ಅನ್ನು ಗೋಲಾಗಿ ಪರಿವರ್ತಿಸಿ ಮತ್ತೊಮ್ಮೆ ಮಿಂಚಿದರು. ಆ ನಂತರ ನವನೀತ್ ಕೌರ್ ಫೀಲ್ಡ್ ಗೋಲು ಗಳಿಸಿದರೆ, ದೀಪಿಕಾ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಮೊದಲಾರ್ಧದಲ್ಲಿ ಭಾರತದ ಮುನ್ನಡೆಯನ್ನು 8-0ಗೆ ವಿಸ್ತರಿಸಿದರು.
ಭಾರತ ತಂಡ ವಿರಾಮದ ನಂತರ ಕೊನೆಯ ಎರಡು ಕ್ವಾರ್ಟರ್ಗಳಲ್ಲಿ ಇನ್ನೂ 11 ಗೋಲುಗಳನ್ನು ಗಳಿಸಿತು. ದೀಪಿಕಾ ಎಂಟು ಗೋಲು ಗಳಿಸಿದರೆ, ಇಶಿಕಾ (11ನೇ, 42ನೇ, 54ನೇ ನಿಮಿಷ) ಮೂರು ಗೋಲುಗಳನ್ನು ಗಳಿಸಿದರು. ಲಾಲ್ರೆಂಸಿಯಾಮಿ, ಬಲ್ಜೀತ್, ನೇಹಾ, ನವನೀತ್ ಕೌರ್, ಲಾಲ್ಥಾನ್ಲುಯಾಂಗಿ ಹಾಗೂ ಸಾಕ್ಷಿ ರಾಣಾ ಗೋಲು ಗಳಿಸಿದ್ದಾರೆ.
ಈ ಪಂದ್ಯವು ಭಾರತದ ಹಿರಿಯ ಗೋಲ್ಕೀಪರ್ ಸವಿತಾ ಪೂನಿಯಾ ಪಾಲಿಗೆ ಮಹತ್ವದ್ದಾಗಿದ್ದು, ಅವರು 320ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದರು. ಈ ಮೂಲಕ ಭಾರತದ ಪರ ಅತ್ಯಂತ ಹೆಚ್ಚು ಪಂದ್ಯವನ್ನಾಡಿದ ವಂದನಾ ಕಟಾರಿಯಾ ಅವರನ್ನು ಸೇರಿಕೊಂಡರು.
ಭಾರತವು ಸ್ಪರ್ಧಾವಳಿಯಲ್ಲಿ ಎರಡನೇ ಗರಿಷ್ಠ ರ್ಯಾಂಕಿನ ತಂಡವಾಗಿದ್ದು, ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಇಂಡೋನೇಶ್ಯ ತಂಡವನ್ನು ಎದುರಿಸಲಿದೆ.






