ಪೋಲಿಗ್ರಾಸ್ ಮ್ಯಾಜಿಕ್ ಸ್ಕಿಲ್ ಪ್ರಶಸ್ತಿಗೆ ದೀಪಿಕಾ ಬಾರಿಸಿದ ಗೋಲು ನಾಮಕರಣ

Photo: IANS
ಹೊಸದಿಲ್ಲಿ: ಭಾರತೀಯ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಆಟಗಾರ್ತಿ ದೀಪಿಕಾರನ್ನು ಪೋಲಿಗ್ರಾಸ್ ಮ್ಯಾಜಿಕ್ ಸ್ಕಿಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. 2024-25ರ ಸಾಲಿನ ಎಫ್ಐಎಚ್ ಹಾಕಿ ಪ್ರೊ ಲೀಗ್ ಋತುವಿನಲ್ಲಿ ವಿಶ್ವ ನಂಬರ್ ವನ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಏಕಾಂಗಿಯಾಗಿ ಬಾರಿಸಿದ ಅಮೋಘ ಗೋಲಿಗಾಗಿ ಅವರನ್ನು ಈ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.
2024-25ರ ಸಾಲಿನ ಎಫ್ಐಎಚ್ ಹಾಕಿ ಪ್ರೊ ಲೀಗ್ ಋತುವಿನ ಪೋಲಿಗ್ರಾಸ್ ಮ್ಯಾಜಿಕ್ ಸ್ಕಿಲ್ ಪ್ರಶಸ್ತಿ ನಾಮಕರಣಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಮತದಾನ ಮಾಡಲು ಕೊನೆಯ ದಿನಾಂಕ ಜುಲೈ 14ರ ಮುಂಜಾನೆ ಗಂಟೆ 3:29. ವಿಜೇತರನ್ನು ಜಗತ್ತಿನಾದ್ಯಂತದ ಹಾಕಿ ಅಭಿಮಾನಿಗಳು ನಿರ್ಧರಿಸುತ್ತಾರೆ. ಋತುವಿನ ಅತ್ಯುತ್ತಮ ಗೋಲು ಯಾವುದು ಎನ್ನುವುದನ್ನು ಅವರು ತೀರ್ಮಾನಿಸುತ್ತಾರೆ.
ದೀಪಿಕಾ ತನ್ನ ಅಮೋಘ ಗೋಲನ್ನು ಬಾರಿಸಿದ್ದು ಫೆಬ್ರವರಿಯಲ್ಲಿ ಭುವನೇಶ್ವರದಲ್ಲಿ ನಡೆದ ಭಾರತೀಯ ಹಂತದ ಪ್ರೊ ಲೀಗ್ನಲ್ಲಿ. ಕಳಿಂಗ ಸ್ಟೇಡಿಯಮ್ ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಆ ಪಂದ್ಯವನ್ನು ಭಾರತವು ಪೆನಾಲ್ಟಿ ಶೂಟೌಟ್ ನಲ್ಲಿ ಗೆದ್ದಿದೆ. ನಿಗದಿತ ಸಮಯ ಮುಗಿದಾಗ ಪಂದ್ಯವು 2-2ರಲ್ಲಿ ಡ್ರಾಗೊಂಡಿತ್ತು.
ಭಾರತವು 0-2ರಲ್ಲಿ ಕುಂಟುತ್ತಿದ್ದಾಗ ಆ ಏಕಾಂಗಿ ಗೋಲನ್ನು ದೀಪಿಕಾ 35ನೇ ನಿಮಿಷದಲ್ಲಿ ಬಾರಿಸಿದ್ದರು.