ICC ಟೆಸ್ಟ್ ರ್ಯಾಂಕಿಂಗ್ಸ್ | ಎರಡು ಸ್ಥಾನ ಮೇಲೇರಿದ ಹರ್ಮನ್ಪ್ರೀತ್; ಮೊದಲ ಸ್ಥಾನ ಕಳೆದುಕೊಂಡ ದೀಪ್ತಿ

Photo Credit : PTI
ದುಬೈ, ಜ. 6: ಭಾರತೀಯ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಗಳವಾರ ಬಿಡುಗಡೆಯಾದ ಹೊಸ ಐಸಿಸಿ ಮಹಿಳಾ ಟಿ20 ರ್ಯಾಂಕಿಂಗ್ ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಎರಡು ಸ್ಥಾನಗಳನ್ನು ಮೇಲೇರಿ 13ನೇ ಸ್ಥಾನವನ್ನು ತಲುಪಿದ್ದಾರೆ. ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಅವರ ಪಂದ್ಯ ಗೆಲ್ಲಿಸಿದ ಬ್ಯಾಟಿಂಗ್ ಪ್ರದರ್ಶನ ರ್ಯಾಂಕಿಂಗ್ ನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಆ ಪಂದ್ಯವನ್ನು ಭಾರತ 15 ರನ್ ಗಳಿಂದ ಗೆದ್ದಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತೀಯ ಮಹಿಳಾ ತಂಡ ಕ್ಲೀನ್ಸ್ವೀಪ್ ಮಾಡಿದೆ. ಹರ್ಮನ್ಪ್ರೀತ್ 43 ಎಸೆತಗಳಲ್ಲಿ 68 ರನ್ ಗಳನ್ನು ಸಿಡಿಸಿದ್ದಾರೆ.
ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮ ಕ್ರಮವಾಗಿ ತಮ್ಮ ಮೂರನೇ ಮತ್ತು ಆರನೇ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ. ಅದೇ ವೇಳೆ ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಆದರೆ ಜೆಮಿಮಾ ರೋಡ್ರಿಗ್ಸ್ ಅಗ್ರ 10ರಿಂದ ಜಾರಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅನಾಬೆಲ್ ಸದರ್ಲ್ಯಾಂಡ್ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಭಾರತೀಯ ಎಡಗೈ ಸ್ಪಿನ್ನರ್ ಶ್ರೀ ಚರಣಿ ಐದು ಸ್ಥಾನಗಳನ್ನು ಗಳಿಸಿ 47ನೇ ಸ್ಥಾನಕ್ಕೆ ಏರಿದ್ದಾರೆ.







