WPL ಸೀಸನ್ 4 | ಜ.9 ರಂದು ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ- ಮುಂಬೈ ಮುಖಾಮುಖಿ

Photo credit: PTI
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಋತುವಿನ ವೇಳಾಪಟ್ಟಿ ಪ್ರಕಟವಾಗಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 2024ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಈ ಋತುವಿನ ಚೊಚ್ಚಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೆ ಋತುವಿಗೆ ಜನವರಿ 9, 2026ರಿಂದ ಚಾಲನೆ ದೊರೆಯಲಿದ್ದು, ಈ ಪಂದ್ಯವು ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದೇ ಪ್ರಥಮ ಬಾರಿಗೆ ಈ ಟೂರ್ನಮೆಂಟ್ ನ ಇತಿಹಾಸದಲ್ಲೇ ಫೈನಲ್ ಪಂದ್ಯವನ್ನು ವಾರಾಂತ್ಯದಲ್ಲಿ ಆಯೋಜಿಸುತ್ತಿಲ್ಲ. ಬದಲಿಗೆ, ಪುರುಷರ ವಿಶ್ವಕಪ್ ಟಿ-20 ಟೂರ್ನಮೆಂಟ್ ವೇಳಾಪಟ್ಟಿಯೊಂದಿಗೆ ಘರ್ಷಣೆಯಾಗುವುದನ್ನು ತಪ್ಪಿಸಲು ಫೆಬ್ರವರಿ 5ರಂದು (ಗುರುವಾರ) ಫೈನಲ್ ಪಂದ್ಯವನ್ನು ಆಯೋಜಿಸಲಾಗಿದೆ. ಟಿ-20 ಪುರುಷರ ವಿಶ್ವಕಪ್ ಟೂರ್ನಮೆಂಟ್ ಅದೇ ವಾರ ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭಗೊಳ್ಳಲಿದೆ. ಫೆಬ್ರವರಿ 7ರಂದು ಕೊಲೊಂಬೊದಲ್ಲಿ ಆಯೋಜನೆಗೊಂಡಿರುವ ಪಾಕಿಸ್ತಾನ ಮತ್ತು ನೆದರ್ ಲ್ಯಾಂಡ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಟಿ-20 ಪುರುಷರ ವಿಶ್ವಕಪ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಮಹಿಳಾ ಪ್ರೀಮಿಯರ್ ಲೀಗ್ ನ 22 ಪಂದ್ಯಗಳು 28 ದಿನಗಳ ಕಾಲ ಎರಡು ಸ್ಥಳಗಳಲ್ಲಿ ನಡೆಯಲಿವೆ. ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಮಣಿಸಿ, ಚೊಚ್ಚಲ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದ್ದಕ್ಕೆ ಸಾಕ್ಷಿಯಾಗಿದ್ದ ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳು ಆಯೋಜನೆಗೊಂಡಿವೆ. ಈ ಪಂದ್ಯಗಳ ಪೈಕಿ ಜನವರಿ 10 ಮತ್ತು 17ರಂದು ಮಧ್ಯಾಹ್ನದಿಂದ ಪ್ರಾರಂಭಗೊಳ್ಳಲಿರುವ ಅವಳಿ ಪಂದ್ಯಗಳೂ ಸೇರಿವೆ. ಉಳಿದೆಲ್ಲ ಪಂದ್ಯಗಳನ್ನು ಸಂಜೆಗೆ ನಿಗದಿಗೊಳಿಸಲಾಗಿದೆ.
ಆನಂತರ, ಈ ಲೀಗ್ ನ ಇತರ ಪಂದ್ಯಗಳು ವಡೋದರಾದ ಕೊಟಾಂಬಿ ಸ್ಟೇಡಿಯಂಗೆ ಸ್ಥಳಾಂತರಗೊಳ್ಳಲಿದ್ದು, ಅಲ್ಲಿ ಫೆಬ್ರವರಿ 2ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯಗಳು ಹಾಗೂ ಫೆಬ್ರವರಿ 5ರಂದು ನಡೆಯಲಿರುವ ಫೈನಲ್ ಪಂದ್ಯ ಸೇರಿ, ಉಳಿದ 11 ಪಂದ್ಯಗಳು ಆಯೋಜನೆಗೊಂಡಿವೆ.







