ಆಸ್ಟ್ರೇಲಿಯ ಟಿ-20 ತಂಡದಲ್ಲಿ ಸ್ಥಾನ ಪಡೆದ ದಿಲ್ಲಿ ಮೂಲದ ನಿಖಿಲ್ ಚೌಧರಿ

ನಿಖಿಲ್ ಚೌಧರಿ | Photo Credit ; Nikhil Chaudhary Instagram
ಮೆಲ್ಬರ್ನ್, ಜೂ.11: ದಿಲ್ಲಿ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿ ಮುಂಬರುವ ಬಾಂಗ್ಲಾದೇಶ ವಿರುದ್ಧ ಸರಣಿಗಾಗಿ ಆಸ್ಟ್ರೇಲಿಯದ ಟಿ-20 ಕ್ರಿಕೆಟ್ ತಂಡದಲ್ಲಿ ಇದೇ ಮೊದಲ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಕ್ರಿಕೆಟಿನ ಮಹತ್ವದ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.
30ರ ವಯಸ್ಸಿನ ಚೌಧರಿ 60 ವರ್ಷಗಳಿಗೂ ಅಧಿಕ ಸಮಯದ ನಂತರ ಆಸ್ಟ್ರೇಲಿಯದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಭಾರತ ಮೂಲದ ಮೊದಲ ಪುರುಷ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು.
ಆಸ್ಟ್ರೇಲಿಯ ತಂಡವು ಜೂನ್ 17ರಿಂದ 21ರ ತನಕ ಚಟ್ಟೋಗ್ರಾಮ್ನಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಚೌಧರಿ ಇದೀಗ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯವನ್ನಾಡುವ ಸ್ಪರ್ಧೆಯಲ್ಲಿದ್ದಾರೆ.
ಸದ್ಯ ಬೆಲ್ಜಿಯಂನ ಇಯುಟಿ-20 ಸ್ಪರ್ಧಾವಳಿಯಲ್ಲಿ ಜೆಬಿ ಬ್ರಗೆಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚೌಧರಿ, ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಶುಕ್ರವಾರದಿಂದ ಢಾಕಾದಲ್ಲಿ ಆಸ್ಟ್ರೇಲಿಯದ ಸೀಮಿತ ಓವರ್ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
‘‘ಬಿಗ್ ಬ್ಯಾಶ್ ಲೀಗ್ನಲ್ಲಿ ತನ್ನ ಪ್ರದರ್ಶನದ ಮೂಲಕ ಆಲ್ರೌಂಡರ್ ನಿಖಿಲ್ ಚೌಧರಿ ಆಯ್ಕೆ ಸಮಿತಿಯ ಮನ ಗೆದ್ದಿದ್ದಾರೆ. ಬಾಂಗ್ಲಾದೇಶದಲ್ಲಿ ನಿಖಿಲ್ ಅವರು ಅಮೂಲ್ಯ ಅನುಭವ ಪಡೆಯಲಿದ್ದಾರೆ. ಮುಂದಿನ ವಾರ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ಆಸ್ಟ್ರೇಲಿಯದ ಪರ ಮೊದಲ ಪಂದ್ಯವನ್ನಾಡುವ ಸಾಧ್ಯತೆಯಿದೆ’’ಎಂದು ರಾಷ್ಟ್ರೀಯ ಆಯ್ಕೆಗಾರ ಟೋನಿ ಡೋಡ್ಮೈಡ್ ಹೇಳಿದ್ದಾರೆ.
ಆಸ್ಟ್ರೇಲಿಯವು ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಗುರಿಂದರ್ ಸಂಧು ಹಾಗೂ ತನ್ವೀರ್ ಸಂಘಾ ಸಹಿತ ಹಲವಾರು ಭಾರತೀಯ ಮೂಲದ ಆಟಗಾರರನ್ನು ಹೊಂದಿತ್ತು. 1960ರ ದಶಕದ ನಂತರ ಯಾವುದೇ ಭಾರತ ಮೂಲದ ಆಟಗಾರನು ರಾಷ್ಟ್ರೀಯ ತಂಡದಲ್ಲಿ ಆಡಿಲ್ಲ ಎಂದು ಕ್ರಿಕೆಟ್ ಡಾಟ್ಕಾಮ್ ವೆಬ್ಸೈಟ್ ತಿಳಿಸಿದೆ.
ಗುಜರಾತ್ ಮೂಲದ ಲೆಗ್ ಸ್ಪಿನ್ನರ್ ರೆಕ್ಸ್ ಸೆಲ್ಲರ್ಸ್ 1964ರ ಕೋಲ್ಕತಾ ಟೆಸ್ಟ್ನಲ್ಲಿ ಆಸ್ಟ್ರೇಲಿಯದ ಪರ ಆಡಿದ್ದರು.
ಪುಣೆಯಲ್ಲಿ ಜನಿಸಿದ್ದ ಮಹಿಳೆಯರ ಕ್ರಿಕೆಟ್ ಲೆಜೆಂಡ್ ಲಿಸಾ ಥಾಲೇಕರ್ 2003 ಹಾಗೂ 2013ರ ನಡುವೆ ಆಸ್ಟ್ರೇಲಿಯ ತಂಡವನ್ನು ಪ್ರತಿನಿಧಿಸಿದ್ದರು. ಚೌಧರಿ ಸೇರ್ಪಡೆಯು ಪುರುಷರ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆಯಾಗಿದೆ.
ನಿಖಿಲ್ ಚೌಧರಿ ಈ ತನಕ ಆಸ್ಟ್ರೇಲಿಯದ ಪೌರತ್ವವನ್ನು ಪಡೆಯದಿದ್ದರೂ ಶಾಶ್ವತ ನಿವಾಸವನ್ನು ಹೊಂದಿದ್ದಾರೆ. ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಐಸಿಸಿಯ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆ.
ಚೌಧರಿ ತನ್ನ ವಾಸ್ತವ್ಯವನ್ನು ಆಸ್ಟ್ರೇಲಿಯಕ್ಕೆ ಬದಲಾಯಿಸುವ ಮೊದಲು ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಪಂಜಾಬ್ ಪರವಾಗಿ 14 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು.
ಚೌಧರಿ 2020ರಲ್ಲಿ ಕ್ವೀನ್ಸ್ಲ್ಯಾಂಡ್ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಪ್ರಯಾಣದ ನಿರ್ಬಂಧದಿಂದಾಗಿ ಆಸ್ಟ್ರೇಲಿಯದಲ್ಲಿ ಉಳಿಯುವಂತಾಯಿತು. ಈ ವೇಳೆ ಚೌಧರಿ ಪೋಸ್ಟ್ಮ್ಯಾನ್ ಆಗಿ ಮೇಲ್ ತಲುಪಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿದ್ದರು.
ಆಸ್ಟ್ರೇಲಿಯದ ಮಾಜಿ ಆಲ್ರೌಂಡರ್ ಜೇಮ್ಸ್ ಹೋಪ್ಸ್ ಅವರು ಚೌಧರಿ ಅವರ ಪ್ರತಿಭೆಯನ್ನು ಗುರುತಿಸಿ ಸ್ಥಳೀಯ ಕ್ರಿಕೆಟ್ಗೆ ಪ್ರವೇಶಿಸಲು ಸಹಾಯ ಮಾಡಿದರು. ಆನಂತರ ಚೌಧರಿ ಅದೃಷ್ಟ ಬದಲಾಯಿತು.
ಬಾಂಗ್ಲಾದೇಶದ ಟಿ-20 ಸರಣಿಗೆ ಆಸ್ಟ್ರೇಲಿಯ ತಂಡ: ಮಿಚೆಲ್ ಮಾರ್ಷ್(ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ನಿಖಿಲ್ ಚೌಧರಿ, ಕೂಪರ್ ಕಾನಲಿ, ಟಿಮ್ ಡೇವಿಡ್, ಜೋಯಲ್ ಡೇವಿಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಆ್ಯರೊನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್, ರಿಲೇ ಮೆರಡಿತ್,ಜೋಶ್ ಫಿಲಿಪ್, ಮ್ಯಾಥ್ಯೂ ರೆನ್ಶಾ, ಆ್ಯಡಮ್ ಝಂಪಾ.






