ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಸ್ತಫಿಝುರ್ರಹ್ಮಾನ್ ಸೇರ್ಪಡೆ

ಮುಸ್ತಫಿಝುರ್ರಹ್ಮಾನ್ | PC :PTI
ಹೊಸದಿಲ್ಲಿ: ಆಸ್ಟ್ರೇಲಿಯದ ಆರಂಭಿಕ ಆಟಗಾರ ಜೇಕ್ ಫ್ರೆಸರ್-ಮೆಕ್ಗರ್ಕ್ ಬದಲಿಗೆ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಧವಾರ ಸೇರಿಸಿಕೊಂಡಿದೆ.
ಈ ವರ್ಷದ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಫ್ರೆಸರ್ ಮೆಕ್ಗರ್ಕ್ 6 ಪಂದ್ಯಗಳನ್ನು ಆಡಿದ್ದರು. ಮೇ 17ರಿಂದ ಪುನರಾರಂಭವಾಗಲಿರುವ 2025ರ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅವರು ಲಭ್ಯ ಇರುವುದಿಲ್ಲ.
2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವ ಮೂಲಕ ಐಪಿಎಲ್ಗೆ ಕಾಲಿಟ್ಟಿದ್ದ ರೆಹಮಾನ್ ಕಳೆದ ವರ್ಷ ಸಿಎಸ್ಕೆ ಪರ ಆಡುವ ಮೊದಲು 2022 ಹಾಗೂ 2023ರಲ್ಲಿ ಡೆಲ್ಲಿ ಮೂಲದ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು.
2 ಕೋ.ರೂ. ಮೂಲ ಬೆಲೆ ಹೊಂದಿದ್ದ 29ರ ಹರೆಯದ ರೆಹಮಾನ್ ಕಳೆದ ವರ್ಷ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು.
ಎಡಗೈ ವೇಗದ ಬೌಲರ್ ಬಾಂಗ್ಲಾದೇಶದ ಪರ 106 ಟಿ-20 ಪಂದ್ಯಗಳನ್ನು ಆಡಿದ್ದು, ಒಟ್ಟು 132 ವಿಕೆಟ್ಗಳನ್ನು ಕಬಳಿಸಿದ್ದಾರೆ.





