ಐಪಿಎಲ್ನಿಂದ ಹಿಂದೆ ಸರಿದು ಡೆಲ್ಲಿ ಕ್ಯಾಪಿಟಲ್ಸ್ ಕ್ಷಮೆ ಕೋರಿದ ಬೆನ್ ಡಕೆಟ್

ಬೆನ್ ಡಕೆಟ್ | Photo Credit : PTI
ಹೊಸದಿಲ್ಲಿ: ‘‘ಈ ವರ್ಷದ ಐಪಿಎಲ್ ಟಿ-20 ಟೂರ್ನಿಯಿಂದ ಹೊರಗುಳಿಯಲಿದ್ದೇನೆ’’ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಮಂಗಳವಾರ ಘೋಷಿಸಿದ್ದಾರೆ. ಡಕೆಟ್ ಅವರನ್ನು ಆಟಗಾರರ ಹರಾಜಿನ ವೇಳೆ ಡೆಲ್ಲಿ ತಂಡವು 2 ಕೋಟಿ ರೂ. ನೀಡಿ ಖರೀದಿಸಿತ್ತು.
ತನ್ನ ಇಂಗ್ಲೆಂಡ್ನ ವೃತ್ತಿಜೀವನವನ್ನು ಉಳಿಸಿಕೊಳ್ಳಲು 2026ರ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಡಕೆಟ್ ಬರೆದುಕೊಂಡಿದ್ದಾರೆ.
‘‘ನಾನು ಐಪಿಎಲ್ನಿಂದ ಹಿಂದೆ ಸರಿಯುವ ಅತ್ಯಂತ ಕಠಿಣ ನಿರ್ಧಾರ ತೆಗೆದುಕೊಂಡಿರುವೆ. ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದು ನನ್ನ ಬಾಲ್ಯದ ಕನಸಾಗಿತ್ತು. ಇಂಗ್ಲೆಂಡ್ ಕ್ರಿಕೆಟಿಗೆ ಸರ್ವಸ್ವ ನೀಡಲು ಬಯಸಿದ್ದೇನೆ. ಅದಕ್ಕಾಗಿ ನಾನು ಸಾಧ್ಯವಾದಷ್ಟು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಇರುವ ಅಗತ್ಯವಿದೆ. ನನ್ನ ಈ ನಿರ್ಧಾರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ನ ಎಲ್ಲರಲ್ಲೂ ಕ್ಷಮೆಯಾಚಿಸುವೆ. ಡೆಲ್ಲಿ ಫ್ರಾಂಚೈಸಿ ಪ್ರತಿನಿಧಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೆ. ನನ್ನ ನಿರ್ಧಾರದಿಂದ ಆಗಿರುವ ಅಡಚಣೆಗಾಗಿ ಕ್ಷಮೆಕೋರುವೆ. ದಿಲ್ಲಿಯ ಎಲ್ಲ ಕ್ರಿಕೆಟ್ ಅಭಿಮಾನಿಗಳಲ್ಲೂ ಕ್ಷಮೆಯಾಚಿಸುವೆ’’ಎಂದು ಡಕೆಟ್ ಹೇಳಿದ್ದಾರೆ.
ಕೊನೆಯಕ್ಷಣದಲ್ಲಿ ಐಪಿಎಲ್ನಿಂದ ಹಿಂದೆ ಸರಿದಿರುವ ಡಕೆಟ್ ನಿಷೇಧವನ್ನು ಎದುರಿಸುವ ಸಾಧ್ಯತೆಯಿದೆ. ಐಪಿಎಲ್ ನಿಯಮದ ಪ್ರಕಾರ, ಹರಾಜಿನ ವೇಳೆ ಖರೀದಿಸಲ್ಪಟ್ಟ ಯಾವುದೇ ವಿದೇಶಿ ಆಟಗಾರನು ಐಪಿಎಲ್ ಆರಂಭವಾಗುವ ಮೊದಲು ಹೊರಗುಳಿದರೆ ಐಪಿಎಲ್ನಿಂದ ಹಾಗೂ ಭವಿಷ್ಯದ ಹರಾಜಿನಿಂದ ಎರಡು ವರ್ಷ ನಿಷೇಧಿಸಲ್ಪಡುತ್ತಾನೆ.




