IPL 2026 | ನಿಧಾನಗತಿಯ ಬೌಲಿಂಗ್; ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಗೆ 12 ಲಕ್ಷ ರೂ. ದಂಡ

ಅಕ್ಷರ್ ಪಟೇಲ್ | Photo Credit : PTI
ಹೊಸದಿಲ್ಲಿ, ಮೇ 12: ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯವನ್ನು ರೋಚಕವಾಗಿ ಗೆದ್ದ ಸಂದರ್ಭದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಅಧಿಕೃತ ಹೇಳಿಕೆಯ ಮೂಲಕ ಐಪಿಎಲ್ ಆಯೋಜಕರು ದಂಡ ವಿಧಿಸಿದ್ದನ್ನು ದೃಢಪಡಿಸಿದರು.
‘ಐಪಿಎಲ್ನ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ಡೆಲ್ಲಿ ತಂಡ ಈ ಋತುವಿನಲ್ಲಿ ಮೊದಲ ಬಾರಿ ನಿಧಾನಗತಿಯ ಬೌಲಿಂಗ್ ಮಾಡಿದೆ. ಇದರ ಪ್ರಕಾರ ಅಕ್ಷರ್ ಪಟೇಲ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲಲು 211 ರನ್ ಬೆನ್ನಟ್ಟಿದ ಡೆಲ್ಲಿ ತಂಡವು ಮೂರು ವಿಕೆಟ್ ಗಳ ಅಂತರದಿಂದ ರೋಚಕ ಜಯ ಸಾಧಿಸಿ, ಪ್ಲೇಆಫ್ ಸುತ್ತಿಗೆ ತಲುಪುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ.
ಪ್ರಿಯಾಂಶ್ ಆರ್ಯ (56 ರನ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (ಔಟಾಗದೆ 59 ರನ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು 5 ವಿಕೆಟ್ ಗಳ ನಷ್ಟಕ್ಕೆ 210 ರನ್ ಗಳಿಸಿತ್ತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಒಂದು ಹಂತದಲ್ಲಿ 74 ರನ್ಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಅಕ್ಷರ್ ಪಟೇಲ್ 56 ರನ್ ಗಳಿಸಿ ನಾಯಕನ ಆಟವಾಡಿದ್ದು, ಡೇವಿಡ್ ಮಿಲ್ಲರ್ ಜೊತೆ ನಿರ್ಣಾಯಕ 51 ರನ್ ಸೇರಿಸಿ ಡೆಲ್ಲಿ ತಂಡವನ್ನು ಗೆಲುವಿನ ಹಳಿಗೆ ತಂದರು.
ಯುವ ಆಟಗಾರರಾದ ಅಶುತೋಶ್ ಶರ್ಮಾ ಹಾಗೂ ಮಾಧವ್ ತಿವಾರಿ ಡೆಲ್ಲಿ ತಂಡವು 19 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 216 ರನ್ ಗಳಿಸುವಲ್ಲಿ ನೆರವಾದರು.
ಈ ಗೆಲುವು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಮುಂದಿನ ಪಂದ್ಯಕ್ಕಿಂತ ಮೊದಲು ಡೆಲ್ಲಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದರೆ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಈಗಲೂ ಏಳನೇ ಸ್ಥಾನದಲ್ಲಿ ಉಳಿದುಕೊಂಡಿದೆ.






