ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಪ್ರಭಾಕರನ್ ಪದಚ್ಯುತಿಗೆ ದಿಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Photo: X
ಹೊಸದಿಲ್ಲಿ : ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ(ಎಐಎಫ್ಎಫ್)ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ಅವರ ಪದಚ್ಯುತಿಗೆ ದಿಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಶಾಜಿ ಪ್ರಭಾಕರನ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸುವ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ನ(ಎಐಎಫ್ಎಫ್)ನಿರ್ಧಾರವನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ನಂಬಿಕೆಯ ಉಲ್ಲಂಘನೆ ಉಲ್ಲೇಖಿಸಿ ಎಐಎಫ್ಎಫ್ ಕಳೆದ ತಿಂಗಳು ಪ್ರಭಾಕರನ್ರನ್ನು ಪದಚ್ಯುತಿಗೊಳಿಸಿತ್ತು. ಈ ನಿರ್ಧಾರವನ್ನು ಎಐಎಫ್ಎಫ್ ಕಾರ್ಯಕಾರಿ ಸಮಿತಿಯು ಅನುಮೋದಿಸಿತ್ತು.
ಕೆಲವು ಅನಿಯಂತ್ರಿತ ನಿರ್ಧಾರಗಳು ಹಾಗೂ ಕ್ರಮಗಳಿಂದಾಗಿ ಪ್ರಭಾಕರನ್ ಅವರು ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಅಸಮಾಧಾನಕ್ಕೆ ಕಾರಣರಾಗಿದ್ದರು ಎಂದು ಎಐಎಫ್ಎಫ್ ಮೂಲಗಳು ತಿಳಿಸಿವೆ.
13 ವರ್ಷಗಳ ಕಾಲ ಫೆಡರೇಶನ್ ಅನ್ನು ಆಳಿದ್ದ ಪ್ರಫುಲ್ ಪಟೇಲ್ ಅವರ ಸಮಿತಿಯನ್ನು ಬದಲಿಸಿ ಸೆಪ್ಟಂಬರ್ 2022ರಲ್ಲಿ ಅಧಿಕಾರಕ್ಕೆ ಬಂದ ಕಲ್ಯಾಣ್ ಚೌಬೆ ಅವರ ಪ್ರಮುಖ ಸಹವರ್ತಿಗಳಲ್ಲಿ ಪ್ರಭಾಕರನ್ ಒಬ್ಬರು.
ಚೌಬೆ ಹಾಗೂ ಪ್ರಭಾಕರನ್ ಅವರ ನಾಯಕತ್ವದಲ್ಲಿ ಹೊಸ ಆಡಳಿತ ಮಂಡಳಿ ಎಐಎಫ್ಎಫ್ನ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತು. ಈ ವರ್ಷದ ಜನವರಿಯಲ್ಲಿ ವಿಷನ್ 2047 ಹೆಸರಿನ ಕಾರ್ಯತಂತ್ರದ ಮಾರ್ಗಸೂಚಿಯನ್ನು ಘೋಷಿಸಿತ್ತು.
ಎಐಎಫ್ಎಫ್ ನಿರ್ಧಾರವು ಆಘಾತ ತಂದಿದೆ. ತನ್ನ ವಿರುದ್ಧ ಹೊರಿಸಲಾಗಿರುವ ಆರೋಪ ನಿರಾಧಾರ ಎಂದು ಹೇಳಿಕೆಯೊಂದರಲ್ಲಿ ಪ್ರಭಾಕರನ್ ತಿಳಿಸಿದ್ದಾರೆ.







