ವಿಶ್ವ ಚಾಂಪಿಯನ್ಶಿಪ್ಸ್ ಟ್ರಯಲ್ಸ್ ನಲ್ಲಿ ಸ್ಪರ್ಧಿಸಲು ಅವಕಾಶ ಕೋರಿಕೆ: ವಿನೇಶ್ ಫೋಗಟ್ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

Image Source : X
ಹೊಸದಿಲ್ಲಿ, ಸೆ. 11: 2026ರ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ಕೋರಿ ವಿನೇಶ್ ಫೋಗಟ್ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಸೆಪ್ಟೆಂಬರ್ 14ರಂದು ನಿಗದಿಯಾಗಿರುವ ಈ ಸ್ಪರ್ಧೆಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಅಡಿಯಲ್ಲಿ ವಿನೇಶ್ ಫೋಗಟ್ ಪಾಲ್ಗೊಳ್ಳುವಂತಿರಲಿಲ್ಲ. ಅದನ್ನು ಪ್ರಶ್ನಿಸಿ ಫೋಗಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಗರ್ಭಧಾರಣೆ, ಹೆರಿಗೆ ಮತ್ತು ಚೇತರಿಕೆಯ ನಂತರ ವಿನೇಶ್ ಇತ್ತೀಚೆಗೆ ಸ್ಪರ್ಧಾ ಕಣಕ್ಕೆ ಮರಳಿದ್ದು, ಪ್ರಸ್ತುತ ಆಯ್ಕೆ ನಿಯಮಗಳು ಅವರನ್ನು ಹೊರಗಿಡುತ್ತವೆ ಎಂದು ಅವರ ಪರ ವಕೀಲರು ವಾದಿಸಿದರು. ಅದೂ ಅಲ್ಲದೆ, ಟ್ರಯಲ್ಸ್ ಗೆ ಕೆಲವೇ ದಿನಗಳ ಮುಂಚಿತವಾಗಿ ಅವರಿಗೆ ಈ ಅರ್ಹತಾ ನಿಯಮಗಳ ಬಗ್ಗೆ ತಿಳಿಸಲಾಗಿದೆ ಎಂಬುದಾಗಿಯೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಫೋಗಟ್ ಅವರ ಮೇಲೆ ಯಾವುದೇ ಸ್ಪರ್ಧಾತ್ಮಕ ನಿಷೇಧ ಹೇರಿಲ್ಲ ಮತ್ತು ನಿಗದಿತ ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆಯುವ ಮುನ್ನ ಅವರು ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಬಹುದು ಎಂದು ಡಬ್ಲ್ಯುಎಫ್ಐ ಹೇಳಿತು.
ವಿನೇಶ್ ಅವರಿಗೆ ಮಧ್ಯಂತರ ಪ್ರವೇಶ ನೀಡಲು ನಿರಾಕರಿಸಿದ ನ್ಯಾಯಾಲಯ, ಹಾಗೆ ಮಾಡುವುದು ಇತರ ಕುಸ್ತಿಪಟುಗಳಿಗೆ ಅನ್ವಯವಾಗುವ ನಿಯಮಗಳಿಂದ ಅವರಿಗೆ ವಿಶೇಷ ವಿನಾಯಿತಿ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಅದೇ ಸಂದರ್ಭದಲ್ಲಿ, ಹೆರಿಗೆಯ ನಂತರ ಕ್ರೀಡಾ ಕ್ಷೇತ್ರಕ್ಕೆ ಮರಳುವ ಮಹಿಳಾ ಅತ್ಲೀಟ್ ಗಳು ಎದುರಿಸುವ ಸವಾಲುಗಳನ್ನು ನ್ಯಾಯಾಲಯವು ಗುರುತಿಸಿತು. ಅಂತಹ ಕ್ರೀಡಾಪಟುಗಳಿಗಾಗಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ಫೆಡರೇಶನ್ ಗೆ ಸೂಚಿಸಿತು.
ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ಸ್ ಅಕ್ಟೋಬರ್ 24ರಿಂದ ನವೆಂಬರ್ 1ರವರೆಗೆ ಕಝಖ್ಸ್ತಾನದ ಅಸ್ತಾನಾದಲ್ಲಿ ನಡೆಯಲಿದೆ.






